2 ತಿಂಗಳ ಸಂಬಳ ನೀಡಿದ ಪಂಜಾಬ್ ಸರ್ಕಾರ
Team Udayavani, Nov 5, 2018, 7:37 AM IST
ತಿಂಗಳ ಸಂಬಳ ತೆಗೆದುಕೊಳ್ಳುವ ಎಲ್ಲಾ ಉದ್ಯೋಗಿಗಳೂ ತಿಂಗಳ ಕೊನೆಯಲ್ಲಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಜಮೆಯಾಗುವ ಸಂಬಳಕ್ಕಾಗಿ ಕಾಯುತ್ತಿರುತ್ತಾರೆ. ಅಂತಹದರಲ್ಲಿ 2 ತಿಂಗಳ ಸಂಬಳ ಒಟ್ಟಿಗೇ ಜಮೆಯಾದರೆ 2 ತಿಂಗಳ ಸಂತೋಷವನ್ನೂ ಒಮ್ಮಲೇ ಅನುಭವಿಸುತ್ತಾರೆ.
ಪಂಜಾಬ್ನ ಉದ್ಯೋಗಿಗಳೂ ಇಂಥ ಸಂಭ್ರಮವನ್ನು ನವೆಂಬರ್ ತಿಂಗಳ ಆರಂಭದಲ್ಲಿ ಅನುಭವಿಸಿದರು. ಆದರೆ ಅವರ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಅಕ್ಟೋಬರ್ ತಿಂಗಳ ಸಂಬಳ ಅವರಿಗೆ ದುಪ್ಪಟ್ಟು ದೊರಕಿತ್ತು. ಇದಾಗಿದ್ದು ಕೆಲ ಸಾಫ್ಟ್ವೇರ್ ದೋಷದಿಂದ. ದೀಪಾವಳಿ
ಸಂದರ್ಭದಲ್ಲಿ 2 ತಿಂಗಳ ಸಂಬಳ ನೋಡಿದರೆ ಯಾರಿಗಾದರೂ ಅದು ದೀಪಾವಳಿ ಬೋನಸ್ ಇರಬಹುದು ಎಂದೇ ತಿಳಿಯುತ್ತದೆ. ಉದ್ಯೋಗಿಗಳೂ ಹಾಗೇ ತಿಳಿದಿದ್ದರು. ಆದರೆ ಅವರ ಎಣಿಕೆ ಸುಳ್ಳಾಯಿತು. ಸಾಫ್ಟ್ವೇರ್ ದೋಷದ ಕಾರಣ ಹೆಚ್ಚುವರಿ ಹಣ ಖಾತೆಗಳಿಗೆ ಜಮೆಯಾಗಿದೆ.
ಅದನ್ನು ಶೀಘ್ರದಲ್ಲೇ ವಾಪಸ್ಸು ಪಡೆಯಲಾಗುವುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ. ದೀಪಾವಳಿ ಬೋನಸ್ ಸಿಕ್ಕಿದೆ ಎಂಬ ಖುಷಿಯಲ್ಲಿದ್ದ ಸರ್ಕಾರಿ ಉದ್ಯೋಗಿಗಳ ಉತ್ಸಾಹವೂ ಜರ್ರನೇ ಇಳಿಯಿತು.