13 ಮತ ಪಡೆದು “ಮೇಯರ್’ ಆದ ಮೇಕೆ!
Team Udayavani, Mar 10, 2019, 4:25 AM IST
ಮೇಕೆ ಎಲ್ಲಾದರೂ “ಮೇಯರ್’ ಹುದ್ದೆಗೇರಿದ್ದನ್ನು ಕೇಳಿದ್ದೀರಾ? ಮಕ್ಕಳ ಕಥೆ ಪುಸ್ತಕಗಳಲ್ಲಿ ಇಂಥ ಕಾಲ್ಪನಿಕ ಕಥೆಗಳನ್ನು ಓದಿರಬಹುದು. ಆದರೆ, ಅಮೆರಿಕದ ಹಳ್ಳಿಯೊಂದರಲ್ಲಿ ಮೇಕೆಯೇ ಮೇಯರ್ ಆಗಿ ಆಯ್ಕೆಯಾಗಿದೆ. ಸುಮಾರು 2500 ಜನಸಂಖ್ಯೆಯಿರುವ ಫೇರ್ ಹೆವೆನ್ ಎಂಬ ಹಳ್ಳಿಗೆ ಈಗ ಲಿಂಕನ್ ಎಂಬ ಹೆಸರಿನ ಮೇಕೆಯೇ ಮೇಯರ್!
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಾಯಿ, ಬೆಕ್ಕುಗಳು ಸೇರಿ 15 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 53 ಮಂದಿ ಮತ ಚಲಾಯಿಸಿದ್ದು, 13 ಮತಗಳನ್ನು ಪಡೆದ ಲಿಂಕನ್ ಗೆಲುವಿನ ನಗೆ ಬೀರಿದೆ. ಇದೇನಪ್ಪಾ ಎಂದು ಯೋಚಿಸುತ್ತಿದ್ದೀರಾ? ಈ ಹಳ್ಳಿಗೆ ಒಂದು ಮೈದಾನ ನಿರ್ಮಿಸುವ ಸಲುವಾಗಿ ದೇಣಿಗೆ ಸಂಗ್ರಹಿಸಲು ಇಂಥದ್ದೊಂದು ವಿನೂತನ ಪ್ರಯತ್ನ ಮಾಡಲಾಗಿತ್ತಂತೆ.
ತಲಾ 5 ಡಾಲರ್ಗಳನ್ನು ನೀಡಿ ಯಾರು ಬೇಕಿದ್ದರೂ ತಮ್ಮ ತಮ್ಮ ಸಾಕುಪ್ರಾಣಿಗಳನ್ನು ಚುನಾವಣಾ ಕಣಕ್ಕಿಳಿಸಬಹುದಿತ್ತು. ಇದರಲ್ಲಿ ಸಂಗ್ರಹವಾದ ದೇಣಿಗೆಯ ಮೂಲಕ ಮೈದಾನ ನಿರ್ಮಿಸುವುದು ಸ್ಥಳೀಯರ ಉದ್ದೇಶ. ಅಂದ ಹಾಗೆ ಗೆದ್ದ ಮೇಕೆಗೆ ಹಳ್ಳಿಯ ಪ್ರಮುಖ ಹಬ್ಬಗಳ ವೇಳೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದಂತೆ.