CONNECT WITH US  

​ಹಿಟ್ ಅಂಡ್ ರನ್ ಕೇಸಲ್ಲಿ ಸಲ್ಮಾನ್ ಖಾನ್ ಖುಲಾಸೆ; ಬಾಂಬೆ ಹೈಕೋರ್ಟ್

ಮುಂಬೈ: ಸುಮಾರು 13 ವರ್ಷಗಳ  2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ನೀಡಿರುವ ತೀರ್ಪನ್ನು ರದ್ದುಪಡಿಸಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಖುಲಾಸೆಗೊಳಿಸಿ  ಬಾಂಬೆ ಹೈಕೋರ್ಟ್ ಗುರುವಾರ ಅಂತಿಮ ತೀರ್ಪು ಪ್ರಕಟಿಸಿದೆ. ಅಲ್ಲದೇ ಎಲ್ಲಾ ಆರೋಪಗಳಿಂದಲೂ ಖಾನ್ ಅವರನ್ನು ದೋಷಮುಕ್ತಗೊಳಿಸಿದೆ. ಇದರಿಂದ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಸಲ್ಮಾನ್ ಖಾನ್ ಗೆ 5 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಬಳಿಕ ಖಾನ್ ಜಾಮೀನಿನ ಮೇಲೆ ಹೊರಬಂದಿದ್ದರು. 

ಕೆಳಹಂತದ ನ್ಯಾಯಾಲಯದ(ಮುಂಬೈ ಸೆಷನ್ ಕೋರ್ಟ್) ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಳಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯ ತೀರ್ಪನ್ನು ಬರೆಸುವ ಪ್ರಕ್ರಿಯೆ ವೇಳೆ ನ್ಯಾ.ಎ.ಆರ್.ಜೋಷಿ ಅವರು, ಖಾನ್ ಮಾಜಿ ಅಂಗರಕ್ಷಕ ರವೀಂದ್ರ ಪಾಟೀಲ್ ನೀಡಿರುವ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಖಾನ್ ಖುಲಾಸೆಗೊಳ್ಳುವ ಸುಳಿವನ್ನು ನೀಡಿದ್ದರು.

ತನಿಖೆ ಸರಿಯಾಗಿ ನಡೆದಿಲ್ಲ:ಬಾಂಬೆ ಹೈಕೋರ್ಟ್
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆ ಸರಿಯಾಗಿ ನಡೆದಿಲ್ಲ. ಅಲ್ಲದೇ ಪ್ರಾಷಿಕ್ಯೂಷನ್ ಕೊಟ್ಟ ಸಾಕ್ಷ್ಯಾಧಾರ ಸಾಕಾಗಲ್ಲ. ಹಾಗಾಗಿ ಸಲ್ಮಾನ್ ಅಪರಾಧಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಜಡ್ಜ್ ನ್ಯಾ.ಜೋಷಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.  ಯಾವುದೇ ಸೆಕ್ಷನ್ ಅಡಿಯಲ್ಲಿ ಶಿಕ್ಷೆ ನೀಡಲಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಸಲ್ಮಾನ್ ಖಾನ್ ಗೆ ಸ್ಥಳೀಯ ಕೋರ್ಟ್ ನೀಡಿದ್ದ 5 ವರ್ಷಗಳ ಜೈಲುಶಿಕ್ಷೆ ತೀರ್ಪನ್ನು ರದ್ದುಪಡಿಸಿರುವ ಹೈಕೋರ್ಟ್, ಖಾನ್ ಯಾರನ್ನು ಕೊಂದಿಲ್ಲ. ಕುಡಿದು ವಾಹನ ಚಲಾಯಿಸುತ್ತಿದ್ದರು ಎನ್ನುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಹಾಗಾಗಿ ಸಲ್ಮಾನ್ ಖಾನ್ ಅವರನ್ನು ಖುಲಾಸೆಗೊಳಿಸಿರುವುದಾಗಿ  ಜಡ್ಜ್ ನ್ಯಾ.ಜೋಷಿ ಹೇಳಿದರು.

ಸಲ್ಮಾನ್ ಗೆ ಕೋರ್ಟ್ ಗೆ ಬರಲು ಹೇಳಿ:
ಹಿಟ್ ಅಂಡ್ ರನ್ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸುವ ವೇಳೆ, ಸಲ್ಮಾನ್ ಖಾನ್ ಎಲ್ಲಿದ್ದರೂ ನ್ಯಾಯಾಲಯಕ್ಕೆ ಬರಲು ಹೇಳಿ, ಅವರು ಇಲ್ಲಿ ಉಪಸ್ಥಿತರಿರಬೇಕು ಎಂದು ಜಡ್ಜ್ ನ್ಯಾ.ಎ.ಆರ್.ಜೋಷಿ ಸಲ್ಮಾನ್ ಪರ ವಕೀಲರಿಗೆ ಸೂಚಿಸಿದ್ದರು. ಆ ನಿಟ್ಟಿನಲ್ಲಿ ಸಲ್ಮಾನ್ ಖಾನ್ 1.30ಕ್ಕೆ ಕೋರ್ಟ್ ಗೆ ಹಾಜರಾಗುತ್ತಾರೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದರು. ಅದರಂತೆ 1.35ಕ್ಕೆ ಸಲ್ಮಾನ್ ಕೋರ್ಟ್ ಗೆ ಆಗಮಿಸಿದ್ದರು.

Trending videos

Back to Top