CONNECT WITH US  

ಪ್ರತ್ಯೂಷಾ ನನ್ನನ್ನ ಕರೆಯುತ್ತಿದ್ದಾಳೆ: ಐಸಿಯುನಲ್ಲಿ ರಾಹುಲ್‌ ರಾಜ್‌

ಹೊಸದಿಲ್ಲಿ : "ಪ್ರತ್ಯೂಷಾ ನನ್ನನ್ನು ಕರೆಯುತ್ತಿದ್ದಾಳೆ' ಎಂದು ಐಸಿಯು ನಲ್ಲಿರುವ ಆಕೆಯ ಬಾಯ್‌ಫ್ರೆಂಡ್‌ ರಾಹುಲ್‌ ರಾಜ್‌ ಸಿಂಗ್‌ ಕನವರಿಸುತ್ತಿರುವುದಾಗಿ ಆತನ ತಂದೆ ಹೇಳುತ್ತಿದ್ದಾರೆ.

"ಪ್ರತ್ಯೂಷಾ ಅನಿರೀಕ್ಷಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಮಗನಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ಹಾಗಾಗಿ ಆತನ ಮನೋಸ್ಥಿತಿ ಹದಗೆಟ್ಟಿದೆ' ಎಂದು ರಾಹುಲ್‌ ರಾಜ್‌ ಸಿಂಗ್‌ ನ ತಂದೆ ಮಾಧ್ಯಮ ಮಂದಿಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಬಾಲಿವುಡ್‌ಲೈಫ್ ಡಾಟ್‌ ಕಾಮ್‌ ತಾಣವು ಪ್ರಕಟಿಸಿರುವ ವರದಿಯ ಪ್ರಕಾರ ರಾಹುಲ್‌ ರಾಜ್‌ ಸಿಂಗ್‌ ನ ತಂದೆ ಹೀಗೆ ಹೇಳಿದ್ದಾರೆ :

ಮಗಳನ್ನು ಕಳೆದುಕೊಂಡ ತಂದೆಗೆ ಆಗುವಷ್ಟೇ ನೋವು ನನಗಾಗಿದೆ. ಪ್ರತ್ಯೂಷಾಳ ಆತ್ಮಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸಿ; ಅಂತೆಯೇ ನನ್ನ ಮಗನೂ ಬೇಗನೆ ಗುಣಮುಖವಾಗಲೆಂದು ಹಾರೈಸಿ. ಪ್ರತ್ಯೂಷಾಳ ಅನಿರೀಕ್ಷಿತ ಆತ್ಮಹತ್ಯೆಯಿಂದ ಆತ ಧೃತಿಗೆಟ್ಟಿದ್ದಾನೆ. ಮನೋಸ್ವಾಸ್ಥ್ಯವನ್ನು ಕಳೆದುಕೊಂಡಿದ್ದಾನೆ. ಈಗ ಆತ ಐಸಿಯುನಲ್ಲಿ ಇದ್ದಾನೆ; ಪ್ರತ್ಯೂಷಾ ನನ್ನನ್ನು ಕರೆಯುತ್ತಿದ್ದಾಳೆ ಎಂದು ಕನವರಿಸುತ್ತಿದ್ದಾನೆ'.

"ಪ್ರತ್ಯೂಷಾಗೆ ನನ್ನ ಮಗ ರಾಹುಲ್‌ ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿದ್ದ ಎಂಬ ಆರೋಪಗಳೆಲ್ಲ ಸುಳ್ಳು. ಪ್ರತ್ಯೂಷಾ ಬಗ್ಗೆ ಈಗ ಹಾಗೆ ಹೇಳುವವರು ಆಕೆ ಜೀವಂತವಿದ್ದಾಗ ಏನು ಮಾಡುತ್ತಿದ್ದರು. ಆಗ ಆಕೆಯ ಪರವಾಗಿ ಮುಂದೆ ಬಾರದವರು ಈಗ್ಯಾಕೆ ಅಂತಹ ಮಾತುಗಳನ್ನು ಹೇಳುತ್ತಿದ್ದಾರೆ' ಎಂದು ರಾಹುಲ್‌ ತಂದೆ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಪ್ರತ್ಯೂಷಾ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರತ್ಯೂಷಾಳನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ಆಕೆಯ ಬಾಯ್‌ ಫ್ರೆಂಡ್‌ ನಾಪತ್ತೆಯಾದದ್ದೇಕೆ ಎಂಬ ಪ್ರಶ್ನೆ ಕೂಡ ಪೊಲೀಸರನ್ನು ಕಾಡಿದೆ.

ಕಲರ್ ಟಿವಿಯ ಜನಪ್ರಿಯ "ಬಾಲಿಕಾ ವಧು' ಟೀವಿ ಧಾರಾವಾಹಿಯಲ್ಲಿನ ಆನಂದೀ ಪಾತ್ರಧಾರಿ ಪ್ರತ್ಯೂಷಾ ಬ್ಯಾನರ್ಜಿ(24) ಕಳೆದ ಶುಕ್ರವಾರ ಬೆಳಗ್ಗೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ತತ್‌ಕ್ಷಣ ಆಕೆಯನ್ನು ಕೋಕಿಲಬೆನ್‌ ಆಸ್ಪತ್ರೆಗೆ ಒಯ್ಯಲಾದರೂ ಫ‌ಲಕಾರಿಯಾಗಲಿಲ್ಲ. ಪ್ರತ್ಯೂಷಾ, ಜನಪ್ರಿಯ ರಿಯಾಲಿಟಿ ಕಾರ್ಯಕ್ರಮಗಳಾದ ಝಲಕ್‌ ದಿಕ್‌ ಲಾಜಾ 5, ಬಿಗ್‌ ಬಾಸ್‌ 7ಗಳಲ್ಲಿ ಮಿಂಚಿದ್ದಾರೆ.

Trending videos

Back to Top