CONNECT WITH US  

ಕೆಕೆಆರ್‌ ಫೆಮಾ ಉಲ್ಲಂಘನೆ: ಶಾರುಖ್‌, ಗೌರಿ, ಜೂಹಿಗೆ ಇಡಿ ನೊಟೀಸ್‌

ಹೊಸದಿಲ್ಲಿ : ವಿದೇಶೀ ವಿನಿಮಯ ನಿರ್ವಹಣಾ ಕಾಯಿದೆಯ (ಫೆಮಾ) ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಗಾಗಿ ಐಪಿಎಲ್‌ನ ಫ್ರ್ಯಾಂಚೈಸಿಯಾಗಿರುವ ಕೋಲ್ಕತ ನೈಟ್‌ ರೈಡರ್‌ಸ್‌ ನ ಮಾಲಕರಾಗಿರುವ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌, ಆತನ ಪತ್ನಿ ಗೌರೀ ಖಾನ್‌ ಮತ್ತು ಬಾಲಿವುಡ್‌ ನಟಿ  ಜೂಹಿ ಚಾವ್ಲಾಗೆ ಜಾರಿ ನಿರ್ದೇಶನಾಲಯ ಶೋಕಾಸ್‌ ನೊಟೀಸ್‌ ಜಾರಿ ಮಾಡಿದೆ.

ಶಾರುಖ್‌ ಖಾನ್‌ ತಮ್ಮ ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಯಿಂದ ಕೋಲ್ಕತಾ ನೈಟ್‌ ರೈಡರ್‌ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿದ ಬಳಿಕ  2008ರಲ್ಲಿ ಐಪಿಎಲ್‌ ತಂಡವನ್ನು ಖರೀದಿಸಿದ್ದರು. ಆತನ ಪತ್ನಿ ಗೌರೀ ಖಾನ್‌ ಇದರ ಓರ್ವ ನಿರ್ದೇಶಕಿಯಾಗಿದ್ದಾರೆ. 

ಆರಂಭದಲ್ಲಿ ಕೋಲ್ಕತ ನೈಟ್‌ ರೈಡರ್ ನ ಎಲ್ಲ ಶೇರುಗಳನ್ನು ಗೌರೀ ಖಾನ್‌ ಹೆಸರಲ್ಲಿ ಖರೀದಿಸಲಾಗಿತ್ತು. ತಂಡವು ಅದ್ಭುತ ಯಶಸ್ಸನ್ನು ಕಂಡ ಬಳಿಕ 2 ಕೋಟಿ ಹೊಸ ಶೇರುಗಳನ್ನು  ಖರೀದಿಸಲಾಗಿ ಆ ಪೈಕಿ 40 ಲಕ್ಷ ಶೇರುಗಳನ್ನು ತಲಾ 10 ರೂ. ಬೆಲೆಗೆ ಜೂಹಿ ಚಾವ್ಲಾ ಗೆ ಮಾರಲಾಗಿತ್ತು. 

ಜಾರಿ ನಿರ್ದೇಶನಾಲಯದ ಪ್ರಕಾರ ಈ ಶೇರುಗಳ ಮೂಲ ಮೌಲ್ಯವು ತಲಾ 86 - 90 ರೂ.ಗಳಾಗಿತ್ತು. ಇದನ್ನು ಜೂಹಿ ಚಾವ್ಲಾಗೆ ಮಾರಲಾದಾಗ 73.6 ಕೋಟಿ ರೂ.ಗಳ ವಿದೇಶೀ ವಿನಿಮಯ ನಷ್ಟ ಉಂಟಾಗಿತ್ತು. 

ಜಾರಿ ನಿರ್ದೇಶನಾಲಯವು ಕೊಟ್ಟಿರುವ ಶೋಕಾಸ್‌ ನೊಟೀಸ್‌ಗೆ ಅದರಲ್ಲಿ ತೋರಿಸಲಾಗಿರುವ ಎಲ್ಲ ವ್ಯಕ್ತಿಗಳು 15 ದಿನಗಳ ಒಳಗೆ ಉತ್ತರಿಸಬೇಕಾಗಿದೆ. 

ಜಾರಿ ನಿರ್ದೇಶನಾಲಯದ ಕೋರಿರುವ ನಷ್ಟ ಪಾವತಿ ಮೊತ್ತವು ಕಾನೂನು ಪ್ರಕಾರ ಸರಿ ಎಂದಾದಲ್ಲಿ ಶಾರುಖ್‌ ಖಾನ್‌ ಕೆಕೆಆರ್‌ ತಂಡಕ್ಕೆ ಹೊಸ ಸಂಕಷ್ಟ ಎದುರಾಗುವುದು ಖಚಿತ. ಇದೀಗ 10ನೇ ಆವೃತ್ತಿಯ ಐಪಿಎಲ್‌ಗೆ ಕೆಕೆಆರ್‌ ತಂಡ ಸಜ್ಜಾಗುತ್ತಿದೆ. 

Trending videos

Back to Top