7ನೇ ದಿನವೂ ಮುಂದುವರಿದ ಗೆಲುವಿನ ಓಟ: ಸೆನ್ಸೆಕ್ಸ್ 133 ಅಂಕ ಜಂಪ್
Team Udayavani, Dec 19, 2018, 10:49 AM IST
ಮುಂಬಯಿ : ಡಾಲರ್ ಎದುರು ರೂಪಾಯಿ ಸ್ಥಿರತೆ ಕಂಡಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಬ್ಲೂ ಚಿಪ್ ಕಂಪೆನಿಗಳಾದ ಮಾರುತಿ ಸುಜುಕಿ, ಎಸ್ಬಿಐ, ಟಾಟಾ ಸ್ಟೀಲ್, ಐಟಿಸಿ ಶೇರುಗಳು ಇಂದು ರೂಪಾಯಿ ಸ್ಥಿರತೆ ಮತ್ತು ಕುಸಿಯುತ್ತಿರುವ ತೈಲ ಬೆಲೆಯ ಕಾರಣಕ್ಕೆ ಉತ್ತಮ ಖರೀದಿಯನ್ನು ಕಂಡವು. ಕಳೆದ ಆರು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ 1,387 ಅಂಕ ಸಂಪಾದಿಸಿದ್ದು ಇಂದಿನ ಏಳನೇ ದಿನ ತನ್ನ ಏರುಗತಿಯನ್ನು ಕಾಯ್ದುಕೊಂಡಿತು.
ಇಂದು ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 132.51 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,479.59 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 51.20 ಅಂಕಗಳ ಮುನ್ನಡೆಯೊಂದಿಗೆ 10,959.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 50 ಪೈಸೆಯ ಜಿಗಿತವನ್ನು ಕಂಡು 69.94 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಬಜಾಜ್ ಫಿನಾನ್ಸ್, ಝೀ ಎಂಟರ್ಟೇನ್ಮೆಂಟ್, ಮಾರುತಿ ಸುಜುಕಿ, ರಿಲಯನ್ಸ್, ಎಸ್ಬಿಐ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.