ನಿರಂತರ 6ನೇ ದಿನವೂ ಸೆನ್ಸೆಕ್ಸ್ ಪತನ; ಎಸ್ ಬ್ಯಾಂಕ್ ಶೇ.30 ಜಿಗಿತ
Team Udayavani, Feb 14, 2019, 11:35 AM IST
ಮುಂಬಯಿ : ನಿರಂತರ ಆರನೇ ದಿನವೂ ಪತನ ಕಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರವಾರದ ವಹಿವಾಟನ್ನು 157.89 ಅಂಕಗಳ ನಷ್ಟದೊಂದಿಗೆ 35,876.22 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಕಳೆದ ಐದು ದಿನಗಳಲ್ಲಿ ಸೆನ್ಸೆಕ್ಸ್ 840 ಅಂಕಗಳನ್ನು ಕಳೆದುಕೊಂಡಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.60 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,746.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಭಾರ್ತಿ ಏರ್ಟೆಲ್, ಇನ್ಫೋಸಿಸ್, ಏಶ್ಯನ್ ಪೇಂಟ್ಸ್, ಆರ್ಐಎಲ್, ಕೋಲ್ ಇಂಡಿಯಾ, ಎಚ್ ಡಿ ಎಫ್ ಸಿ ಬ್ಯಾಂಕ್, ಎಚ್ ಡಿ ಎಫ್ ಸಿ, ಟಿಸಿಎಸ್, ಒಎನ್ಜಿಸಿ ಮತ್ತು ಮಹೀಂದ್ರ ಶೇರುಗಳು ಶೇ.3.09ರ ನಷ್ಟಕ್ಕೆ ಗುರಿಯಾದರೆ ಎಸ್ ಬ್ಯಾಂಕ್ ಶೇರು ಶೇ. 31ರ ಜಿಗಿತವನ್ನು ಕಂಡದ್ದು ವಿಶೇಷವೆನಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,654 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,164 ಶೇರುಗಳು ಮುನ್ನಡೆ ಸಾಧಿಸಿದವು; 1,365 ಶೇರುಗಳು ಹಿನ್ನಡೆಗೆ ಗುರಿಯಾದವು; 125 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.