CONNECT WITH US  

ಮಾಧ್ಯಮ, ನ್ಯಾಯಾಂಗದಿಂದ ಪ್ರಜಾಪ್ರಭುತ್ವದ ಉಳಿವು: ದತ್ತೇಶ್‌

ಚಾಮರಾಜನಗರ: ಮಾಧ್ಯಮ ಮತ್ತು ನ್ಯಾಯಾಂಗ ಈ ಎರಡರಿಂದ ಮಾತ್ರ ಪ್ರಜಾ ಪ್ರಭುತ್ವ ಉಳಿಸಲು ಸಾಧ್ಯ ಎಂದು ಮಾನಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ಎಸ್‌.ದತ್ತೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

ನಗರದ ಪಿಡಬ್ಲೂಡಿ ಕಾಲೋನಿಯಲ್ಲಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸಮಾರಂಭದಲ್ಲಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹೊರತಂದಿರುವ 2016ನೇ ಸಾಲಿನ ಡೇರಿಯನ್ನು ಬಿಡುಗಡೆ ಮಾಡಿ ಅವರು  ಮಾತನಾಡಿದರು. ಸಮಾಜವನ್ನು ತಿದ್ದುವ ಶಕ್ತಿ ಮಾಧ್ಯಮಕ್ಕಿದೆ. ಪ್ರಜಾಪ್ರಭುತ್ವದಲ್ಲಿರುವ ಮೂರು ಅಂಗಗಳಿಗೆ ಇರುವಷ್ಟೇ ಜವಾಬ್ದಾರಿ ಪತ್ರಿಕಾರಂಗಕ್ಕೂ ಇದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ದೊಡ್ಡದಾಗಿ ಬೆಳೆಯುತ್ತಿದ್ದು, ಮಾಧ್ಯಮ ಬಿಟ್ಟು ಸಮಾಜ ಇಲ್ಲ ಎಂಬಂತಾಗಿದೆ ಎಂದರು.

ಹಳ್ಳಿ ಹಳ್ಳಿಗಳಲ್ಲಿಯೂ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮ ಹೆಚ್ಚು ಶಕ್ತಿಶಾಲಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಮಾಜವನ್ನು ತಿದ್ದು ಹಾಗೂ ಯುವ ಜನಾಂಗವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯ ವಾಗಿದೆ ಎಂದು ಅವರು ತಿಳಿಸಿದರು. ದೈನಂದಿನ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರಿಗೆ ದಿನಚರಿ ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ ಸಂಸ್ಥೆಯಿಂದ ಪ್ರತಿ ವರ್ಷದಂತೆ ಈ ಬಾರಿ ಪತ್ರಕರ್ತರ ಸಂಘದ ಸಹಯೋಗದಲ್ಲಿ ಡೇರಿಯನ್ನು ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಉತ್ತಮ ಪತ್ರಕರ್ತ ಪ್ರಶಸ್ತಿ: ಮಾನಸ ಶಿಕ್ಷಣ ಸಂಸ್ಥೆಯಿಂದ ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆಗೈದ ಪತ್ರಕರ್ತರೊಬ್ಬರನ್ನು ಗುರುತಿಸಿ ಸನ್ಮಾನಿಸಲು ಸಂಘಕ್ಕೆ 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫ‌ಲಕ ನೀಡಲಾಗುವುದು. ಉತ್ತಮ ಪತ್ರಕರ್ತರನ್ನು ಪತ್ರಕರ್ತರ ಸಂಘ ಆಯ್ಕೆ ಮಾಡಲಿ ಎಂದು ಅವರು ತಿಳಿಸಿದರು.
ಸಂಘದ ಅಧ್ಯಕ್ಷ ಎಸ್‌.ಎಂ.ನಂದೀಶ್‌, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಜೇಶ್‌ ಬೆಂಡರವಾಡಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ, ರಾಜ್ಯ ಪರಿಷತ್‌ ಸದಸ್ಯ ಎ.ಡಿ'ಸಿಲ್ವ, ಖಜಾಂಚಿ ಎಂ.ಇ.ಮಂಜುನಾಥ್‌, ನಿರ್ದೇಶಕ ಪ್ರಕಾಶ್‌ ಬೆಲ್ಲದ್‌ ಉಪಸ್ಥಿತರಿದ್ದರು.


Trending videos

Back to Top