CONNECT WITH US  

ಕುಡಿವ ನೀರಿನ ಬವಣೆ ನೀಗಿಸಿ

ಚಾಮರಾಜನಗರ: ಜಿಲ್ಲೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವೆಡೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಾರದಂತೆ ಎಚ್ಚರವಹಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಬಿಸಲವಾಡಿ, ಕೊತ್ತಲವಾಡಿ ಹಾಗೂ ಕಿಲಗೆರೆ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ 2.20 ಕೋಟಿ ರೂ. ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಕಳೆದ ಎರಡು ಅವಧಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಬದ್ಧನಾಗಿದ್ದು, ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. 

ಅನುದಾನ: ಕ್ಷೇತ್ರದ ಜನರ ಆಶೀರ್ವಾದದಿಂದ ಇಂದು ಸಚಿವನಾಗಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ. ಶಾಸಕನಾಗಿ ಕಳೆದ ಎರಡು ಅವಧಿಯಲ್ಲಿ ಸಾಕಷ್ಟು ಪ್ರಗತಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಂಡಿದ್ದೇನೆ. ಸಚಿವನಾದ ಬಳಿಕವೂ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನಂತೆ ಗಮನ ಹರಿಸುತ್ತೇನೆ. ಸರ್ಕಾರದಿಂದ ಬರಬೇಕಾದ ಎಲ್ಲಾ ಅನುದಾನಗಳನ್ನು ತಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಸಂಪರ್ಕ ರಸ್ತೆಗಳು ನಾಗರಿಕರ ಸಂಚಾರಕ್ಕೆ ಅಗತ್ಯವಾಗಿದ್ದು, ಗುಣಮಟ್ಟದಿಂದ ಕೂಡಿದ ರಸ್ತೆ, ಚರಂಡಿ ಅವಶ್ಯಕ. ಆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಅಧಿಕಾರಿಗಳು, ಗ್ರಾಮಸ್ಥರ ಸಹಕಾರದಿಂದ ಶೀಘ್ರವಾಗಿ ನಿರ್ಮಿಸಿ ಕೊಡಬೇಕು ಎಂದು ಸೂಚಿಸಿದರು.

ಗ್ರಾಮದ ನಾಗರಿಕರು ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಅನುಕೂಲ ಕಲ್ಪಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಬಿಸಲವಾಡಿ ಗ್ರಾಮಕ್ಕೆ ಸಚಿವರಾಗಿ ಮೊದಲ ಬಾರಿಗೆ ಆಗಮಿಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸ್ವಾಗತಿಸಿ ಸನ್ಮಾನಿಸಿದರು. 

ಕಾಮಗಾರಿ: ಬಿಸಲವಾಡಿ ಗ್ರಾಮದ ಮುಖ್ಯ ರಸ್ತೆಯಿಂದ ತಮಿಳುನಾಡು ಗಡಿ ರಸ್ತೆಯವರೆಗೆ ಕೈಗೊಳ್ಳಲಾಗುತ್ತಿರುವ 1  ಕೋಟಿ ರೂ.  ವೆಚ್ಚದ ರಸ್ತೆ ಡಾಂಬರೀಕರಣ, ಒಆರ್‌ಎಫ್ ಯೋಜನೆಯಡಿ ಕೊತ್ತಲವಾಡಿ ಗ್ರಾಮದ ಮುಖ್ಯ ರಸ್ತೆಯಿಂದ ತೆರಕಣಾಂಬಿ ರಸ್ತೆವರೆಗೆ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಕಿಲಗೆರೆ ಗ್ರಾಮದ ನಾಯಕ ಬಡಾವಣೆಯಲ್ಲಿ ಟಿಎಸ್‌ ಪಿ ಯೋಜನೆಯಡಿ, ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಈ ವೇಳೆ ಜಿಪಂ ಸದಸ್ಯ ಶಶಿಕಲಾ ಸೋಮಲಿಂಗಪ್ಪ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯರಾದ ರತ್ನಮ್ಮ, ಬಾಲಚಂದ್ರಮೂರ್ತಿ, ಮಹದೇವಶೆಟ್ಟಿ, ಗ್ರಾಪಂ ಅಧ್ಯಕ್ಷ ಗಿರೀಶ್‌, ಉಪಾಧ್ಯಕ್ಷೆ ರಮ್ಯಾ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್‌, ಪಿಎಸಿಸಿ ಬ್ಯಾಂಕ್‌ ಅಧ್ಯಕ್ಷ ಸಿದ್ದಮಲ್ಲಪ್ಪ, ಎ.ಎಸ್‌ ಗುರುಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಪ್ಪ, ಜಿಪಂ ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್‌, ಮುಖಂಡರಾದ ಶಾಂತಮಲ್ಲಪ್ಪ, ಶಂಭಪ್ಪ, ಬಿಸಲವಾಡಿ ಉಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

Trending videos

Back to Top