CONNECT WITH US  

ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ

ಚಾಮರಾಜನಗರ: ಹಿಂದುಳಿದ ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ಸಮುದಾಯದವರು ಶಿಕ್ಷಣಕ್ಕೆ ವಿಶೇಷ ಒತ್ತು ಕೊಡಬೇಕು. ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.

ವಸತಿ ಶಾಲೆ, ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಸೇರಿದಂತೆ ವ್ಯಾಸಂಗಕ್ಕೆ ಪೂರಕ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಎಲ್ಲಾ ಅನುಕೂಲಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸಮಾಜದಲ್ಲಿ ಉನ್ನತ ಹುದ್ದೆ ಪಡೆಯಲು ಹಾಗೂ ಆರ್ಥಿಕ ಸುಧಾರಣೆ ಶಿಕ್ಷಣ ಅಗತ್ಯ ಎಂದು ಹೇಳಿದರು. 

ಹಡಪದ ವಿಚಾರಧಾರೆ: ಹಡಪದ ಅಪ್ಪಣ್ಣ ಬಸವಣ್ಣನವರಂತೆ ಕಾಯಕವೇ ಕೈಲಾಸ ಎಂಬ ತತ್ವವನ್ನು ಪ್ರತಿಪಾದಿಸಿದರು. ಅಪ್ಪಣ್ಣನವರ ವಚನ, ಸಂದೇಶ ಹಾಗೂ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಜಯಂತಿ ಕಾರ್ಯಕ್ರಮಕ್ಕೂ ಅರ್ಥ ಬರುತ್ತದೆ.

ಸವಿತಾ ಸಮಾಜದವರಿಗೆ ವಸತಿ, ನಿವೇಶನ, ರುದ್ರಭೂಮಿ ಇತರೆ ಬೇಕಿರುವ ಸೌಲಭ್ಯಗಳಿಗೆ ಪೂರಕವಾಗಿ ಸ್ಪಂದಿಸಲಾಗುತ್ತದೆ. ಗಂಗಾಕಲ್ಯಾಣ ಯೋಜನೆ, ನೇರಸಾಲ, ವಿದ್ಯಾಭ್ಯಾಸಕ್ಕೆ ನೆರವು ಇತರೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.

ಉಪನ್ಯಾಸಕ ಅರಕಲವಾಡಿ ನಾಗೇಂದ್ರ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರನ್ನು ಅನುಯಾಯಿಗಳ ಪೈಕಿ ಹಡಪದ ಅಪ್ಪಣ್ಣ ವಿಶೇಷವಾಗಿ ನಿಲ್ಲುತ್ತಾರೆ. ಕಾಯಕ ನಿಷ್ಠೆ, ದಾನದ ಮಹತ್ವ ಕುರಿತು ಅಪಾರವಾಗಿ ಪ್ರತಿಪಾದಿಸಿದ ಅಪ್ಪಣ್ಣ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಹಡಪದ ಅಪ್ಪಣ್ಣ 200ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ.  ಅವರ ಪತ್ನಿ ಲಿಂಗಮ್ಮ ಶರಣೆಯಾಗಿದ್ದರು. ಅಪ್ಪಣ್ಣನವರ ಸಂದೇಶಗಳು ಸಾರ್ವಕಾಲಿಕವಾದವು ಎಂದರು. 

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ನಗರಸಭೆ ಅಧ್ಯಕ್ಷೆ ಶೋಭಾ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾಧಿಕಾರಿ ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ, ಜಿಪಂ ಉಪಕಾರ್ಯದರ್ಶಿ ಮುನಿರಾಜಪ್ಪ,  ಮುದ್ದುಮಾದು, ನಂಜೇದೇವರು, ಚಿನ್ನಸ್ವಾಮಿ, ಮಂಜುನಾಥ್‌, ಮಂಜು ಇತರರು ಉಪಸ್ಥಿತರಿದ್ದರು.


Trending videos

Back to Top