CONNECT WITH US  

ಮಾದಕ ವ್ಯಸನದಲ್ಲಿ ಅಕ್ಷರಸ್ಥರೇ ಹೆಚ್ಚು ಭಾಗಿ

ಚಾಮರಾಜನಗರ: ಆಧುನಿಕ ಸಮಾಜದಲ್ಲಿ ವಿದ್ಯಾವಂತ ಯುವ ಜನರೇ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದು ಇದರ ಪರಿಹಾರಕ್ಕೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಬಸವರಾಜ ತಿಳಿಸಿದರು.

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ಔಷಧ ವಿಪತ್ತು ನಿರ್ಮೂಲನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಓದಿದವರಿಂದಲೇ ಹೆಚ್ಚು: ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ 16- 22ರ ವಯೋಮಿತಿಯ ಯುವ ಜನರು ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ ಚಟಕ್ಕೆ ಒಳಗಾಗಿರುವುದು ಆತಂಕಕಾರಿ ವಿಷಯವಾಗಿದೆ. ಅದರಲ್ಲೂ ಅಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ಬಳಕೆಗೆ ಮುಂದಾಗಿರುವುದು ಕಂಡುಬಂದಿದೆ. ಹೀಗಾಗಿ ಯುವಕರಲ್ಲಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

18 ವರ್ಷ ಒಳಪಟ್ಟವರಿಗೆ ಧೂಮಪಾನ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಇದಕ್ಕಾಗಿ ಕಾಯಿದೆ ಸಹ ತರಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹ ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ಆಯೋಜನೆ ಮಾಡುತ್ತಿದೆ ಎಂದು ಜಿಲ್ಲಾ ನ್ಯಾಯಾದೀಶರು ತಿಳಿಸಿದರು.

ಎಚ್ಚರ ಅಗತ್ಯ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ‌ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ ಮಾತನಾಡಿ, ಯುವಶಕ್ತಿ ದೇಶದ ಅಮೂಲ್ಯ ಆಸ್ತಿ. ಇಂತಹ ಯುವ ಜನರನ್ನು ಮಾದಕ ಔಷಧ, ವಸ್ತುಗಳನ್ನು ನೀಡಿ ದಾರಿ ತಪ್ಪಿಸುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಎಚ್ಚರ ವಹಿಸಬೇಕಿದೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಯುವ ಜನರಿಗೆ ಮಾರ್ಗದರ್ಶನ ಮಾಡಬೇಕಿದೆ ಎಂದರು.

ಸಹಪಾಠಿಗಳ ಪ್ರಭಾವ: ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಮಾತನಾಡಿ, ಬದಲಾದ ಆಧುನಿಕ ಜೀವನ ಶೈಲಿಯು ಮಾದಕ ವಸ್ತುಗಳ ಬಗ್ಗೆ ಯುವಜನರನ್ನು ಆಕರ್ಷಿಸುತ್ತಿದೆ. ನಗರ ಪ್ರದೇಶಗಳಲ್ಲಿ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದವರು,

ಸಹಪಾಠಿಗಳ ಪ್ರಭಾವಕ್ಕೆ ಒಳಗಾಗುವರು ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ವ್ಯಾಸಂಗಕ್ಕೆ ಮಾತ್ರ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಇಂದುಶೇಖರ್‌, ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲೇಶ್‌ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಚ್‌.ಪ್ರಸಾದ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ. ರಮೇಶ್‌, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಜಯಶೀಲಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌. ಅರುಣ್‌ಕುಮಾರ್‌, ಬಾಲ ನ್ಯಾಯಮಂಡಳಿ ಸದಸ್ಯ ಟಿ.ಜೆ ಸುರೇಶ್‌ ಇತರರು ಹಾಜರಿದ್ದರು.

Trending videos

Back to Top