CONNECT WITH US  

ಗೊಂದಲದ ಗೂಡಾಗಿರುವ ಸಮ್ಮಿಶ್ರ ಸರ್ಕಾರ

ಗುಂಡ್ಲುಪೇಟೆ: ರಾಜ್ಯದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಬಜೆಟ್‌ ಮಂಡಿಸಿದ್ದರೂ ವಿಧಾನಸಭಾ ಸದಸ್ಯರಿಗೆ ಇನ್ನೂ ಯಾವುದೇ ಅನುದಾನ ನೀಡದ ಪರಿಣಾಮ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂದು ಶಾಸಕ ರಾಮದಾಸ್‌ ಹೇಳಿದರು.

ಪಟ್ಟಣದಲ್ಲಿ ತಾಲೂಕು ಬಿಜೆಪಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೇವಲ ಅಧಿಕಾರ ಹಿಡಿಯಲು ಮೈತ್ರಿ ಮಾಡಿಕೊಂಡು ರಚನೆಯಾದ ಸಮ್ಮಿಶ್ರ ಸರ್ಕಾರ ಗೊಂದಲದ ಗೂಡಾಗಿದೆ. ಇನ್ನೂ ಟೇಕಾಫ್ ಆಗಿಲ್ಲ.

ಸರ್ಕಾರ ಬಜೆಟ್‌ ಮಂಡಿಸಿದರೂ ಇನ್ನೂ ಅನುದಾನ ನೀಡಿಲ್ಲ. ಇದರ ಹಿಂದೆ ಇದ್ದ ಶಾಸಕರು ಬಳಕೆ ಮಾಡದ ಹಣವನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕಾಗಿದ್ದು, ಇದರಿಂದ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದರು.  

ಸಾರಿಗೆ ಇಲಾಖೆಯಲ್ಲಿ ನಿವೃತ್ತರಾಗುವ ನೌಕರರಿಗೆ ಕೊಡಲು ಹಣವಿಲ್ಲವಾಗಿದೆ. ಅವರ ಸೇವೆಯನ್ನು ಇನ್ನೂ ಎರಡು ವರ್ಷ ಮುಂದುವರಿಸುವ ಚಿಂತನೆಯಲ್ಲಿ ಸರ್ಕಾರ ಇದೆ. ದಿನ ಬಳಕೆ ವಸ್ತುಗಳ ಮೇಲೆ ತೆರಿಗೆ ಹಾಕುತ್ತಿದೆ. ಇದರಿಂದ ಬೇಸತ್ತ ಜನರಲ್ಲಿ ಈ ಸರ್ಕಾರ ಯಾವಾಗ ಬೀಳುತ್ತದೋ ಎಂಬ ಭಾವನೆ ಉಂಟಾಗಿದೆ ಎಂದರು.

ಸಮಸ್ಯೆ ನಿವಾರಣೆ: ಶಾಸಕ ನಿರಂಜನಕುಮಾರ್‌ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ನೀಡದಿದ್ದರೂ ತಾವು ಕ್ಷೇತ್ರದಲ್ಲಿ ಸಂಚರಿಸಿ ಅಧಿಕಾರಿಗಳ ಸಭೆ ನಡೆಸಿ ಮೂಲ ಸೌಕರ್ಯಗಳ ಕೊರತೆ ನಿವಾರಣೆಗೆ ಶ್ರಮಿಸುತ್ತಿದ್ದೇನೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅನುಷ್ಠಾನ ಮಾಡಲಾಗುತ್ತಿದೆ. ಹಂತಹಂತವಾಗಿ ಉದ್ದೇಶಿತ ಎಲ್ಲಾ ಕೆರೆಗಳಿಗೂ ಕಬಿನಿ ನದಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮನವರಿಕೆ ಮಾಡಿಕೊಡಿ: ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಜಾರಿಗೆ ತಂದಿರುವ ಉಜ್ವಲ್‌, ಜನಧನ್‌, ಇಂದ್ರಧನುಷ್‌, ಫ‌ಸಲ್‌ ಭಿಮಾ ಯೋಜನೆಗಳ ಬಗ್ಗೆ ಮನೆಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡಬೇಕು. ಮುಂದಿನ ಪುರಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತ ದೊರಕುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮೈಸೂರಿನ ಶಾಸಕ ನಾಗೇಂದ್ರ, ಪುರಸಭೆ ಅಧ್ಯಕ್ಷ ಪಿ.ಗಿರೀಶ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮಲ್ಲಿಕಾರ್ಜುನ, ಮೈಸೂರು ಬ್ಯಾಂಕ್‌ ನಿರ್ದೇಶಕ ಸುನಿಲ್‌, ತಾಪಂ ಸದಸ್ಯರಾದ ಪ್ರಭಾಕರ್‌, ಮಹೇಶ್‌, ಮುಖಂಡರಾದ ಶಿವಮಲ್ಲಪ್ಪ,

ಎಂ.ಪುಟ್ಟರಂಗನಾಯಕ್‌, ಕೆ.ಆರ್‌.ಲೋಕೇಶ್‌, ಆಲತ್ತೂರು ರಾಜೇಶ್‌, ರಾಜ್ಯ ಸಮಿತಿ ಸದಸ್ಯರಾದ ಹುಚ್ಚೇಗೌಡ, ಕೊಡಸೋಗೆ ಸಿದ್ದರಾಮಪ್ಪ, ಯುವ ಮುಖಂಡರಾದ ಕಿರಣ್‌ಗೌಡ, ಸತೀಶ್‌, ಎಲ್‌.ಮಣಿಕಾಂತ್‌, ಮಂಜುನಾಥ್‌, ಮಡಳ್ಳಿರಾಜಪ್ಪ, ದೊಡ್ಡಹುಂಡಿ ಜಗದೀಶ್‌ ಇತರರಿದ್ದರು. 

Trending videos

Back to Top