CONNECT WITH US  

ಕುಟುಂಬಕ್ಕಿಂತ ಕ್ಷೇತ್ರದ ಜನರ ಮೇಲೆಯೇ ಕಾಳಜಿ

ಚಾಮರಾಜನಗರ: ದಿವಂಗತ, ಮಾಜಿ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ಕುಟುಂಬಕ್ಕಿಂತ ಕ್ಷೇತ್ರದ ಜನರ ಬಗ್ಗೆ ಹೆಚ್ಚಿನ ಪ್ರೀತಿ, ಕಾಳಜಿ ಹೊಂದಿದ್ದರು. ಸದಾ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು ಎಂದು ಕಾಂಗ್ರೆಸ್‌ ಮುಖಂಡ, ಎಚ್‌ಎಸ್‌ಎಂ ಪುತ್ರ ಗಣೇಶ್‌ ಪ್ರಸಾದ್‌ ಹೇಳಿದರು. ತಾಲೂಕಿನ ಹರವೆಯಲ್ಲಿ ಮಾಜಿ ಸ‌ಚಿವ ದಿವಂಗತ ಎಚ್‌.ಎಸ್‌.ಮಹದೇವಪ್ರಸಾದ್‌ ಅಭಿಮಾನ ಬಳಗದಿಂದ ಪ್ರಸಾದ್‌ರ 60ನೇ ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 

ತಮ್ಮ ತಂದೆ ಮಹದೇವಪ್ರಸಾದ್‌,  ಕ್ಷೇತ್ರ, ಜಿಲ್ಲೆ ಮಾತ್ರವಲ್ಲದೇ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಇಡೀ ರಾಜ್ಯದಲ್ಲಿ ಗುಂಡ್ಲುಪೇಟೆ ಕ್ಷೇತ್ರವನ್ನು ಮಾದರಿ ಮಾಡುವ ಗುರಿಯೊಂದಿಗೆ  ಪ್ರತಿಯೊಂದು ಯೋಜನೆಗಳನ್ನು ಪ್ರಥಮವಾಗಿ  ಕ್ಷೇತ್ರಕ್ಕೆ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಸದಾ ಅಭಿವೃದ್ಧಿ ಪರ ಚಿಂತನೆ ಮಾಡುತ್ತಿದ್ದವರು. ಅವರ ಸೇವಾ ಮನೋಭಾವನೆ ಮತ್ತು ಬಡವರ ಅಭಿವೃದ್ಧಿಯಲ್ಲಿ ಹೆಚ್ಚು ಸಂತೋಷ ಕಾಣುತ್ತಿದ್ದರು ಎಂದು ಸ್ಮರಿಸಿದರು. 

ಪ್ರಬುದ್ಧ ರಾಜಕಾರಣಿ: ಜಿಪಂ ಸದಸ್ಯ ಹಾಗೂ ಅಭಿಮಾನಿ ಬಳಗ ಅಧ್ಯಕ್ಷ  ಕೆರೆಹಳ್ಳಿ ನವೀನ್‌ ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿತ್ವವುಳ್ಳ ಮಹದೇವ ಪ್ರಸಾದ್‌ ಜಿಲ್ಲೆಯ ಪ್ರಬುದ್ಧ ರಾಜಕಾರಣಿಗಳಲ್ಲಿ ಒಬ್ಬರು. ಜಿಲ್ಲೆಗೆ ಶಾಶ್ವತ ಯೋಜನೆಗಳನ್ನು ಕೊಟ್ಟರು. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ  ನೀರು ತುಂಬಿಸುವ ಯೋಜನೆ, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು, ಮುಕ್ತ ವಿಶ್ವ ವಿದ್ಯಾಲಯ, ಜಿಲ್ಲಾ ಕೇಂದ್ರ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್‌ ಸೇರಿದಂತೆ ಅನೇಕ ಕಾರ್ಯಯೋಜನೆಗಳನ್ನು ನೀಡಿದ್ದರು ಎಂದರು.

ಶಿಬಿರದಲ್ಲಿ 230ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆಗೊಳ್ಳಪಟ್ಟು  ಕಣ್ಣಿನ ಪೊರೆಯುಳ್ಳ 50 ಮಂದಿಯನ್ನು  ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿನ ಅರವಿಂದ  ಕಣ್ಣಾಸ್ಪತ್ರೆಗೆ ಕರೆದೊಯ್ಯಲಾಯಿತು. ಗುಂಡ್ಲುಪೇಟೆ ತಾಪಂ ಅಧ್ಯಕ್ಷ ಜಗದೀಶ್‌, ತಾಪಂ ಸದಸ್ಯ  ರೇವಣ್ಣ, ಮಾಜಿ ಸದಸ್ಯ  ಉದಯಕುಮಾರ್‌,  ಮುಖಂಡರಾದ  ಸೈಯದ್‌ ರಫಿ,  ಮುಕ್ಕಡಹಳ್ಳಿ ರವಿಕುಮಾರ್‌, ಗುರುಸಿದ್ದೇಗೌಡ, ಹಿರೇಬೇಗೂರು ಗುರುಸ್ವಾಮಿ, ಮಲ್ಲಪ್ಪ, ರೇಣುಕಾ ಪ್ರಸಾದ್‌,  ಹರವೆ ರಂಗಸ್ವಾಮಿ, ಎಚ್‌ಎಸ್‌ಎಂ ಅಭಿಮಾನಿಗಳು ಭಾಗವಹಿಸಿದ್ದರು. 

ಇಂದು ಹೆಚ್ಚು ಓದಿದ್ದು

Trending videos

Back to Top