CONNECT WITH US  

ಪರಿಸರ ಸ್ನೇಹಿ ಗಣೇಶ ಚತುರ್ಥಿಗೆ ಡಿಸಿ ಸೂಚನೆ

ಚಾಮರಾಜನಗರ: ಮುಂಬರುವ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸುವ ದಿಸೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಹಾಗೂ ಹಾನಿಕಾರಕ ಬಣ್ಣಗಳಿಂದ ಗಣೇಶ ವಿಗ್ರಹ ತಯಾರಿ, ವಿತರಣೆ ಹಾಗೂ ಮಾರಾಟ ತಡೆಯಲು ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ವಿಗ್ರಹಗಳ ನಿಷೇಧ ಬಗ್ಗೆ ಕೈಗೊಳ್ಳಬೇಕಿರುವ ಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ನಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಿಂದೆಯೇ ಅಧಿಸೂಚನೆ ಹೊರಡಿಸಿದೆ.

ಜಿಲ್ಲೆಯಲ್ಲೂ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಹಾಗೂ ರಾಸಾಯನಿಕ ಬಣ್ಣದ ವಿಗ್ರಹಗಳನ್ನು ಮಾರಾಟ ಮಾಡದಂತೆ ತಡೆಯಬೇಕು. ಪೊಲೀಸ್‌ ಇಲಾಖೆ ಅಧಿಕಾರಿಗಳು, ತಹಶೀಲ್ದಾರರು ಸಹ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ವಿಗ್ರಹಗಳ ಮಾರಾಟ, ತಯಾರಿ,

ವಿತರಣೆ ತಡೆಯುವ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಸಹಕರಿಸಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಸುತ್ತೋಲೆ, ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಎಲ್ಲ ಕೆಲಸಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಪಿಒಪಿ ಗಣೇಶ ಆಗಮನಕ್ಕೆ ತಡೆ: ಜಿಲ್ಲೆಯ ಗಣೇಶ ವಿಗ್ರಹ ತಯಾರಕರು ಮಾತನಾಡಿ, ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣೇಶ ವಿಗ್ರಹ ತಯಾರಿಯಿಂದ ಸಾಂಪ್ರದಾಯಿಕವಾಗಿ ಜೇಡಿ ಮಣ್ಣಿನಿಂದ ವಿಗ್ರಹ ತಯಾರಿಸುತ್ತಿರುವ ತಮ್ಮ ಕಸುಬಿಗೂ ತೊಂದರೆಯಾಗಿದೆ.

ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದೇವೆ. ಹಬ್ಬದ ಹಿಂದಿನ 3 ದಿನಗಳಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ವಿಗ್ರಹವನ್ನು ಬೇರೆ ಜಿಲ್ಲೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಕಾವೇರಿ, ತಯಾರಕರು ಸಹ ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ವಿಗ್ರಹ ತಯಾರಿಸುವವರು ಇದ್ದರೆ ಮಾಹಿತಿ ನೀಡಬೇಕು. ಅಧಿಕಾರಿಗಳನ್ನು ಕಳುಹಿಸಿ ವಿಗ್ರಹ ತಯಾರಿ ಮೊದಲೇ ತಿಳಿವಳಿಕೆ ನೀಡಿ ಕ್ರಮ ವಹಿಸಲು ಸಾಧ್ಯವಾಗುತ್ತದೆ ಎಂದರು.

ಬಣ್ಣಲೇಪಿತ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸಲು ಇರುವ ನಿಷೇಧ ಕಾಯಿದೆ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಶಾಲಾ ಹಂತದಲ್ಲಿಯೂ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಿ ಪೋಷಕರಿಗೆ ಮನವರಿಕೆ ಮಾಡಿಕೊಡಲು ಉತ್ತೇಜಿಸಬೇಕು ಎಂದು ಜಿಲ್ಲಾಧಿಕಾರಿ ಕಾವೇರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಂ, ಜಿಲ್ಲಾ ಪರಿಸರ ಅಧಿಕಾರಿ ರಘುರಾಂ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಸುರೇಶ್‌, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.

Trending videos

Back to Top