ಪ್ರವಾಹ ಪೀಡಿತರಿಗೆ ಜಿಲ್ಲಾ ಸಚಿವರ ಸಾಂತ್ವನ

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಕಾವೇರಿ, ಜಿಪಂ ಸಿಇಒ ಡಾ. ಕೆ.ಹರೀಶ್ಕುಮಾರ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಉಂಟಾಗಿರುವ ಬೆಳೆ ಹಾನಿ, ಜಲಾವೃತ ಕೃಷಿ ಭೂಮಿ, ಮನೆಗಳನ್ನು ಸಚಿವರು ಅವಲೋಕಿಸಿದರು.
ಸಂತ್ರಸ್ತರಿಗೆ ಸಾಂತ್ವನ: ಮೊದಲಿಗೆ ದಾಸನಪುರ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಜಲಾವೃತಗೊಂಡಿರುವ ಬೆಳೆ, ರಸ್ತೆಯಲ್ಲಿ ಹರಿದಾಡುತ್ತಿರುವ ನೀರು ಇತರೆ ಸಮಸ್ಯೆಗಳನ್ನು ಪರಿಶೀಲಿಸಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಪ್ರವಾಹ ಪರಿಸ್ಥಿತಿಯಿಂದ ಆಗಿರುವ ನಷ್ಟದ ಮಾಹಿತಿ ಪಡೆದು ಅಗತ್ಯ ಪರಿಹಾರ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಬಳಿಕ ಹಳೇ ಹಂಪಾಪುರ ಗ್ರಾಮಕ್ಕೆ ತೆರಳಿ, ಅಲ್ಲಿಯೂ ಜಲಾವೃತಗೊಂಡಿರುವ ಜಮೀನು, ಕೊಟ್ಟಿಗೆ ಸೇರಿದಂತೆ ಇತರೆ ಸ್ಥಳಗಳನ್ನು ವೀಕ್ಷಿಸಿದರು. ಗ್ರಾಮಸ್ಥರು ಪ್ರವಾಹದಿಂದ ಆಗಿರುವ ಸಮಸ್ಯೆಗಳ ಅಳಲು ತೋಡಿಕೊಂಡರು.
ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು. ಪರಿಹಾರಕ್ಕೆ ಅಗತ್ಯ ಸಿದ್ಧತೆಗಳನ್ನು ಕಲ್ಪಿಸಲು ಸಜ್ಜಾಗಿರುವಂತೆ ನಿರ್ದೇಶನ ನೀಡಿದ ಸಚಿವರು, ಗ್ರಾಮದಲ್ಲಿರುವ ಶಾಲೆಯಲ್ಲಿ ಗಂಜೀಕೇಂದ್ರ ತೆರೆಯಲು ಆದೇಶಿಸಿದರು. ಜಿಲ್ಲಾಧಿಕಾರಿ ಕಾವೇರಿ ಸ್ಪಂದಿಸಿ ಅಧಿಕಾರಿಗಳಿಗೆ ಗಂಜಿ ಕೇಂದ್ರ ಆರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.
ಬಳಿಕ ಮುಳ್ಳೂರು, ಹಳೇ ಆಣಗಳ್ಳಿ, ಹರಳೆ ಗ್ರಾಮಗಳಿಗೂ ಸಚಿವರು ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿ ಪ್ರವಾಹ ಸಂತ್ರಸ್ಥರಿಗೆ ವಾಸ್ತವ್ಯ, ಊಟ, ಉಪಾಹಾರ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಸಚಿವರು ಸೂಚಿಸಿದರು.
ಈ ವೇಳೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಎಸಿ ಫೌಜಿಯಾ ತರನ್ನುಂ, ತಹಶೀಲ್ದಾರ್ ಚಂದ್ರಮೌಳಿ, ಪ್ರವಾಹ ಪರಿಸ್ಥಿತಿ ಗ್ರಾಮಗಳ ಉಸ್ತುವಾರಿಗಾಗಿ ನೇಮಕವಾಗಿರುವ ನೋಡೆಲ್ ಅಧಿಕಾರಿಗಳಾದ ಗಂಗಾಧರ್, ರಾಚಪ್ಪ, ನಾಗೇಶ್, ಲಿಂಗರಾಜು, ನಗರಸಭೆ ಆಯುಕ್ತ ಸುರೇಶ್ ಇತರೆ ಅಧಿಕಾರಿಗಳು ಹಾಜರಿದ್ದರು.