CONNECT WITH US  

ಪೆಟ್ಟಿಗೆ ಅಂಗಡಿ ತೆರವಿಗೆ ವಿರೋಧ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಗ್ರಾಮ ಪಂಚಾಯಿತಿ ಸ್ಥಳದಲ್ಲಿದ್ದ ಪೆಟ್ಟಿಗೆ ಅಂಗಡಿ ತೆರವಿಗೆ ಬಂದಿದ್ದ ತಾಪಂ ಅಧಿಕಾರಿಗಳು ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಹಿಂದಿರುಗಿದ ಘಟನೆ ನಡೆದಿದೆ.

ಗ್ರಾಮದ ಸಂಪತ್ತು ಮನೆ ಸಮೀಪ ಕುನ್ನನಾಯ್ಕ ಕಳೆದ 40 ವರ್ಷಗಳಿಂದ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಗ್ರಾಪಂ ಲೈಸೆನ್ಸ್‌ ಹಾಗೂ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದಾರೆ. ಇದರಿಂದ ನಮ್ಮ ಮನೆಗೆ ಪ್ರತ್ಯೇಕ ಬಾಗಿಲು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದನ್ನು ತೆರವುಗೊಳಿಸಿ ಎಂದು ಗ್ರಾಪಂಗೆ ಸಂಪತ್ತು ದೂರು ನೀಡಿದ್ದರೂ ಯಾವುದೇ ಉಪಯೋಗವಾಗಿರಲಿಲ್ಲ. 

ಈ ಹಿನ್ನೆಲೆಯಲ್ಲಿ ಸಂಪತ್ತು ನೀಡಿದ್ದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಪೆಟ್ಟಿಗೆ ಅಂಗಡಿ ತೆರವಿಗೆ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಅದರಂತೆ ಅಂಗಡಿ ತೆರವುಗೊಳಿಸುವಂತೆ ಗ್ರಾಪಂ ಪಿಡಿಒ ಮಮತಾ ಪೆಟ್ಟಿಗೆ ಅಂಗಡಿ ಮಾಲಿಕ ಕುನ್ನನಾಯ್ಕರಿಗೆ ನೋಟಿಸ್‌ ನೀಡಿದ್ದರು. ಆದರೂ ಪೆಟ್ಟಿಗೆ ಅಂಗಡಿ ತೆರವುಗೊಳಿಸಿರಲಿಲ್ಲ.

ಇದರಿಂದ ಪೊಲೀಸ್‌ ಭದ್ರತೆಯೊಂದಿಗೆ ಸ್ಥಳಕ್ಕೆ ತಾಪಂ ಇಒ ಡಾ.ಕೃಷ್ಣಮೂರ್ತಿ, ಪಿಡಿಒ ಮಮತಾ ವಿರುದ್ಧ ಸಾರ್ವಜನಿಕರು ಪ್ರತಿರೋಧ ವ್ಯಕ್ತಪಡಿಸಿದರು.  ನಂತರ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಅಧ್ಯಕ್ಷ ಉಮೇಶ್‌, ಬಿಜೆಪಿ ಮುಖಂಡ ರಮೇಶ್‌ ತಾಪಂ ಅಧಿಕಾರಿಗಳ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಗ್ರಾಮದಲ್ಲಿ ಇನ್ನೂ ಹಲವಾರು ಒತ್ತುವರಿ ಪ್ರಕರಣಗಳಿದ್ದರೂ ಜೀವನೋಪಾಯಕ್ಕೆ ನಡೆಸುತ್ತಿರುವ ಅಂಗಡಿ ತೆರವು ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ಪ್ರಕರಣದಲ್ಲಿ ದೂರು ನೀಡಿರುವ ಸಂಪತ್ತು ತಮ್ಮ ನಿವೇಶನಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿದ್ದು ಇದರ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕಾಗಿದೆ. ಆದ್ದರಿಂದ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಕೂಡಲೇ ಇಒ ಡಾ.ಕೃಷ್ಣಮೂರ್ತಿ ಒಂದು ವಾರದೊಳಗೆ ಸಂಪತ್ತು ನಿವೇಶನದ ಸರ್ವೆ ನಡೆಸಿ ವರದಿ ನೀಡುವಂತೆ ಸ್ಥಳದಲ್ಲಿದ್ದ ಪಿಡಿಒಗೆ ಆದೇಶಿಸಿ ತೆರವು ಕಾರ್ಯಾಚರಣೆ ಮುಂದೂಡಿದರು. 

 ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ ಶರ್ಮ, ತೆರಕಣಾಂಬಿ ಠಾಣೆಯ ಪಿಎಸ್‌ಐ ರವಿಕಿರಣ್‌, ಮುಖಂಡರಾದ ಆನಂದನಾಯ್ಕ, ಗೋವಿಂದನಾಯ್ಕ, ಮಹೇಶನಾಯ್ಕ, ಕರಿಯನಾಯ್ಕ, ಗೋಪಾಲನಾಯ್ಕ ಇದ್ದರು.


Trending videos

Back to Top