CONNECT WITH US  

ರೈತರ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಿಸಬೇಕು, ಜಿಲ್ಲಾದ್ಯಂತ ಅವ್ಯಹತವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಮರಳು ದಂಧೆಯನ್ನು ತಡೆಯಬೇಕು ಹಾಗೂ ರೈತರ ಸಾಲ ಮನ್ನಾ ಮಾಡಿ ಪ್ರತಿ ಗ್ರಾಪಂ ಮಟ್ಟದಲ್ಲಿ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟು ಸೋಮವಾರ ಜಿಲ್ಲಾ ಕೇಂದ್ರದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಕಾರ್ಯಕರ್ತರು ಭಾರೀ ಪ್ರತಿಭಟನಾ ರ್ಯಾಲಿ ನಡೆಸಿದರು.

ನಗರದ ಬಿಬಿ ರಸ್ತೆಯ ಶನಿಮಹಾತ್ಮ ದೇವಾಲಯದಿಂದ ಮೆರವಣಿಗೆ ಆರಂಭಿಸಿದ ಮಾವನ ಹಕ್ಕುಗಳ ಜಾಗೃತಿ ಸಮಿತಿ ಕಾರ್ಯಕರ್ತರು ನಗರದ ಬಿಬಿ ರಸ್ತೆ ಮುಖಾಂತರ ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ ಕೆಲಕಾಲ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ತಾಲೂಕು ಕಚೇರಿ ಎದುರು ಧರಣಿ: ರಸ್ತೆ ತಡೆ ನಡೆಸಿದ ಬಳಿಕ ಪ್ರತಿಭಟನಕಾರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತರ ಸಾಲ ಮನ್ನಾ ಮಾಡದ ಪರಿಣಾಮ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಜಿಲ್ಲಾ ಕೇಂದ್ರದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಮೂಲ ಸೌಕರ್ಯಗಳು ಇಲ್ಲದೇ ಜನ ನರಳಾಡುತ್ತಿದ್ದಾರೆ.

ಕೂಡಲೇ ಜಿಲ್ಲಾಡಳಿತ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಪ್ರತಿ ಗ್ರಾಪಂ ಕೇಂದ್ರದಲ್ಲಿ ಗೋಶಾಲೆಗಳನ್ನು ತೆರೆಯಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ವಿ.ಅಶ್ವತ್ಥ್ ಮಾತನಾಡಿ, ಜಿಲ್ಲೆಯಲ್ಲಿ ಭೀಕರ ಬರಗಾಲ ಇದ್ದರೂ ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.

ಹಕ್ಕೋತ್ತಾಯಗಳೇನು: ಜಿಲ್ಲೆಯಲ್ಲಿ ಪ್ರಭಾವಿಗಳಿಂದ ಒತ್ತುವರಿಯಾಗಿರುವ ಕೆರೆ, ಕುಂಟೆಗಳನ್ನು ತೆರವುಗೊಳಿಸಿ ಪುನಚ್ಚೇತನಗೊಳಿಸಬೇಕು, ರೈತರ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡಿ ಬಡ್ಡಿರಹಿತ ಸಾಲ ನೀಡಬೇಕು, ಜಿಲ್ಲಾ ಕೇಂದ್ರದ ಸುತ್ತಮುತ್ತ ಅಕ್ರಮವಾಗಿ ನಡೆಯತ್ತಿರುವ ಕಲ್ಲು ಗಣಿಗಾರಿಕೆ ಹಾಗೂ ಅಕ್ರಮ ಮರಳು ದಂಧೆಯನ್ನು ತಡೆಯಬೇಕು,  ಜಿಲ್ಲೆಯ ಪ್ರತಿ ಗ್ರಾಪಂ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆದು ರೈತರ ರಾಸುಗಳಿಗೆ ಉಚಿತವಾಗಿ ಮೇವು ಹಾಗೂ ಅಗತ್ಯ ಕುಡಿಯುವ ನೀರು ಒದಗಿಸಬೇಕು,

ಬಗುರ್‌ ಹುಕ್ಕಂ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರಿಗೆ ಕೂಡಲೇ ಸಾಗುವಳಿ ಚೀಟಿಗಳನ್ನು ವಿತರಿಸಬೇಕು, ಜಿಲ್ಲೆಯ ಕಾರ್ಮಿಕರನ್ನು ಗುರುತಿಸಿ ಅವರಿಗೆ ಕನಿಷ್ಠ ವೇತನ ಕೊಡಿಸಬೇಕು, ಸರ್ಕಾರದ ಸೌಲಭ್ಯಗಳನ್ನು ಪಾರದರ್ಶಕವಾಗಿ ಅರ್ಹ ಫ‌ಲಾನುಭವಿಗಳಿಗೆ ನೀಡಬೇಕು, ಬೆಳೆ ನಷ್ಠಕ್ಕೀಡಾದ ರೈತರಿಗೆ ಕೂಡಲೇ ಬರ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿ ಹಲವಾರು ಬೇಡಿಕೆಗಳನ್ನು ಕೂಡಲೇ ಜಿಲ್ಲಾಡಳಿತ ಬಗೆಹರಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ ಮೋಹನ್‌ ರವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ತಾಲೂಕು ಅಧ್ಯಕ್ಷ ವಿ.ಅಶ್ವತ್ಥ್, ನಗರ ಘಟಕದ ಅಧ್ಯಕ್ಷ ಎನ್‌.ಮಂಜುನಾಥ, ರೈತ ಸಮಿತಿ ಅಧ್ಯಕ್ಷ ಉದಯ ಶಂಕರ್‌, ಕಾರ್ಮಿಕ ಘಟಕದ ಅಧ್ಯಕ್ಷ ಎಂ.ಮಂಜುನಾಥ, ಯುವ ಘಟಕದ ಅಧ್ಯಕ್ಷ ಎ.ವೈ.ಮುನಿಕೃಷ್ಣ, ಮಹಿಳಾ ಘಟಕ ಅಧ್ಯಕ್ಷೆ ರುಕ್ಮಿಣಿ ಸೇರಿದಂತೆ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top