CONNECT WITH US  

ಹಿಂದೂ, ಮುಸ್ಲಿಂರಲ್ಲಿ ಮೊಹರಂ ಭಾವೈಕ್ಯತೆ 

ಚಿಕ್ಕಬಳ್ಳಾಪುರ: ತ್ಯಾಗ, ಬಲಿದಾನದ ಸಂಕೇತ ಹಾಗೂ ಹಿಂದೂ, ಮುಸ್ಲಿಂ ಸಮುದಾಯ ನಡುವೆ ಭಾವೈಕ್ಯತೆ ಸಾಮಾರಸ್ಯ ಸಾರುವ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಭಾನುವಾರ  ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲಾ ಕೇಂದ್ರದ ಗಂಗಮ್ಮ ಗುಡಿ ಬಳಿ ಕಳೆದ 9 ದಿನಗಳಿಂದ ಶ್ರದ್ಧಾಭಕ್ತಿಯಿಂದ ಬಾಬಾಯ್ಯನನ್ನು ಪ್ರತಿಷ್ಠಾಪಿಸಿ ಹಿಂದೂ, ಮುಸ್ಲಿಮರು ಭಕ್ತಿಭಾವದಿಂದ ವಿಶೇಷ ಪೂಜೆ ಸಲ್ಲಿಸಿ ಮೊಹರಂ ಆಚರಿಸಿದರು. ಬಳಿಕ ಮೊಹರಂ ಕೊನೆ ದಿನದ ಪ್ರಯುಕ್ತ ನಗರದ ಮುಖ್ಯ ರಸ್ತೆಗಳಲ್ಲಿ ಬಾಬಯ್ಯ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ಪೀರುಗಳ ಹಸ್ತಗಳನ್ನು ಮೆರವಣಿಗೆ ನಡೆಸಿ ಮೊಹರಂ ಹಬ್ಬಕ್ಕೆ ಕಳೆತಂದರು.

ಜಿಲ್ಲಾ ಕೇಂದ್ರದಲ್ಲಿ ಮೊಹರಂ ಪ್ರಯುಕ್ತ ನಡೆದ ಬೃಹತ್‌ ಮೆರವಣಿಗೆಯ ಸಂದರ್ಭದಲ್ಲಿ ನಗರದ ನೂತನ ಖಾಸಗಿ ಬಸ್‌ ನಿಲ್ದಾಣದಲ್ಲಿ ಹೂವು, ಹಣ್ಣುಗಳ ವ್ಯಾಪಾರಿಗಳು, ಆಟೋ ಚಾಲಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಶ‌ರಬತ್ತು ವಿತರಿಸಿದರು. ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತ್ಯಾಗ, ಬಲಿದಾನದ ಸಂಕೇತ: ಮೊಹರಂ ಹಬ್ಬವು ಇಸ್ಲಾಂ ಧ‌ರ್ಮದ ಹೊಸ ವರ್ಷವಾಗಿದ್ದು, ಕೋಮು ಸೌಹಾರ್ದತೆಯ ಪ್ರತೀಕವಾಗಿದೆ. ಪ್ರವಾದಿ ಹಜರತ್‌ ಮಹಮದ್‌ ಪೈಗಂಬರ್‌ರವರ ಮೊಮ್ಮಕ್ಕಳು ಇಸ್ಲಾಂ ಧರ್ಮದ ರಕ್ಷಣೆಗಾಗಿ ಹೋರಾಡಿ ಯುದ್ಧದಲ್ಲಿ ಹುತಾತ್ಮರಾದ ಹಿನ್ನೆಲೆಯಲ್ಲಿ ಅವರ ತ್ಯಾಗ ಮತ್ತು ಬಿಲಿದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೊಹರಂ ಹಬ್ಬವನ್ನು ಆಚರಿಸುತ್ತಾರೆಂದು ಮುಸ್ಲಿಂ ಧರ್ಮ ಗುರು ಅಸ್ಮ ಮಜೀದ್‌ ವಿಶೇಷ ಪ್ರಾರ್ಥನೆ ವೇಳೆ ತಿಳಿಸಿದರು.

ಮೊಹರಂ ಹಬ್ಬದ ವೇಳೆ ನಗರದಲ್ಲಿ ಬೃಹತ್‌ ಮೆರವಣಿಗೆ ನಡೆಸಲಾಯಿತು. ಈ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಉಪ ವಿಭಾಗದ ಡಿವೈಎಸ್‌ಪಿ ಪ್ರಭುಶಂಕರ್‌ ಮಾರ್ಗದರ್ಶನದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಶಿವಸ್ವಾಮಿ, ಉಪ ನಿರೀಕ್ಷಕ ರಾಮಪ್ರಸಾದ್‌ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.


Trending videos

Back to Top