CONNECT WITH US  

ತಮಟೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಯಾವುದೇ ಹಳ್ಳಿಗೆ ಹೋದರೇ ಸಾಕು ಅಲ್ಲಿ ಈಗ ತಮಟೆಯದೇ ಸದ್ದು..! ಅಲ್ಲಲ್ಲಿ ಗುಂಪು ಕಟ್ಟಿಕೊಂಡು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಈಗ ತಮಟೆ ಕಲಾವಿದರು ಸಾಥ್‌ ನೀಡುತ್ತಿದ್ದಾರೆ.

 ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆ ದಿನೇ ದಿನೇ ರಂಗೇರುತ್ತಿರುವಾಗಲೇ ವಿವಿಧ ರಾಜಕೀಯ ಪಕ್ಷಗಳಿಗೆ ಇದೀಗ ತಮಟೆ ಕಲಾವಿದರ ನೆನಪಾಗಿದೆ. ನಿಮಗೆ ಕೂಲಿ ಎಷ್ಟೋ ಬೇಕು ಕೇಳಿ ನಮ್ಮ ಅಭ್ಯಂತರವೇನೂ ಇಲ್ಲ. ನಾವು ಹೋದ ಕಡೆಯಲ್ಲಾ ಬಂದು ತಮಟೆ ಬಾರಿಸಿದರೆ ಸಾಕು ಅಂತ ತಮಟೆ ಕಲಾವಿದರನ್ನು ರಾಜಕೀಯ ಪಕ್ಷಗಳ ಮುಖಂಡರು ಪರಿಪರಿಯಾಗಿ ಕೇಳುವ ದೃಶ್ಯಗಳು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿವೆ. ಇನ್ನು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರಕ್ಕೆ ಹೋದಕಡೆಯಲ್ಲಾ ತಮಟೆಗಳ ಅಬ್ಬರ ಮಾರ್ಧನಿಸುತ್ತಿವೆ.

 ದುಪ್ಪಟ್ಟು ಸಂಭಾವನೆ: ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಯನ್ನು ಅರ್ಥ ಮಾಡಿಕೊಂಡಿರುವ ತಮಟೆ ಕಲಾವಿದರು ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡು ರಾಜಕೀಯ ಪಕ್ಷಗಳಿಗೆ ದುಬಾರಿಯಾಗಿದ್ದಾರೆ. ತಮಗೆ ಇಂತಿಷ್ಟೇ ಸಂಭಾವನೆ ನೀಡಿ ಎಂದು ತಮಟೆ ಕಲಾವಿದರು ರಾಜಕೀಯ ಪಕ್ಷಗಳ ಮುಖಂಡರ ಮುಂದೆ ತಮ್ಮ ಬೇಡಿಕೆ ಮಂಡಿಸುತ್ತಿದ್ದಾರೆ, ನೀವು ಬರುವ ಕಡೆಯಲ್ಲಾ ನಮಗೆ ಊಟದ ವ್ಯವಸ್ಥೆ, ತಿರುಗಾಡಲು ವಾಹನ ಕೊಡಿ ಎಂದು ರಾಜಕೀಯ ಪಕ್ಷಗಳ ಮತ್ತು ಚುನಾವಣಾ ಅಖಾಡದ ಅಭ್ಯರ್ಥಿಗಳಿಗೆ ಹೆಚ್ಚುವರಿ ಬೇಡಿಕೆಗಳನ್ನು ಕಲಾವಿದರು ಇಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಇದೀಗ ತಮಟೆ ಕಲಾವಿದರಿಗೂ ಭಾರೀ ಬೇಡಿಕೆ ಕಂಡು ಬಂದಿದೆ. ರಾಜಕೀಯ ಪಕ್ಷಗಳ ಮುಖಂಡರೂ ತಮ್ಮ ಪಕ್ಷಗಳ ಅಭ್ಯರ್ಥಿಗಳು ಪ್ರಚಾರಕ್ಕೆ ಹೋಗುವ ಕಡೆಯಲ್ಲಾ ತಮಟೆ ಕಲಾವಿದರಿಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ವಿಧಾನ ಸಭಾ ಚುನಾವಣಾ ಅಖಾಡ ದಿನೇ ದಿನೇ ಕಾವೇರುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದ ಭರಾಟೆಯನ್ನು ಜೋರು ಮಾಡಿವೆ. ಹಳ್ಳಿಗಳಿಗೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರವೇಶ ಮಾಡುತ್ತಿದ್ದಂತೆ ಕಲಾವಿದರು ತಮಟೆ ವಾದನವನ್ನು ಜೋರು ಮಾಡುತ್ತಾ ಪರೋಕ್ಷವಾಗಿ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಹೀಗಾಗಿಯೇ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಡೆಸುತ್ತಿರುವ ಪ್ರಚಾರದ ಭರಾಟೆಗೆ ಸಾಥ್‌ ನೀಡಲು ತಮಟೆ ಕಲಾವಿದರಿಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡೋ ಸೃಷ್ಟಿಯಾಗಿದೆ.

ತಮಟೆ ಕಲಾವಿದರಿಗೂ ಈಗ ಹೆಚ್ಚಿದ ಬೇಡಿಕೆ ಜಾಗತೀಕರಣದ ಅಬ್ಬರದಿಂದ ತಮಟೆ ಕಲೆ ನಶಿಸುತ್ತಿರುವ ಸಂದರ್ಭದಲ್ಲಿ ಸಮಾಜದಲ್ಲಿ ಕೂಡ ತಮಟೆ ಕಲಾವಿದರು ಅಪರೂಪವಾಗುತ್ತಿದ್ದಾರೆ. ಇದರಿಂದ ಸಾಮಾನ್ಯವಾಗಿ ತಮಟೆ ಕಲಾವಿದರು ಸಿಗುವುದೇ ಅಪರೂಪ, ಇಂತಹ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಅಬ್ಬರದೊಂದಿಗೆ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ ಅಖಾಡ ಜಿಲ್ಲೆಯ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಪ್ರಚಾರದ ಕಾರ್ಯಕ್ರಮಗಳಿಗೆ ಹಾಗೂ ಅಭ್ಯರ್ಥಿಗಳು ಮತಯಾಚನೆ ಮಾಡುವ ವೇಳೆ ತಮಟೆ ಕಲಾವಿದರಿಗೆ ರಾಜಕೀಯ ಪಕ್ಷಗಳಿಂದ ಭಾರೀ ಬೇಡಿಕೆ ಕಂಡು ಬರುತ್ತಿದ್ದು, ತಮಟೆ ಕಲಾವಿದರಿಗೂ ಈಗ ಬೇಡಿಕೆ ಹೆಚ್ಚಾಗಿ ನೀಡುವ ಸಂಭಾವನೆ ಹೆಚ್ಚಾಗಿದೆ.

ಕಾಗತಿ ನಾಗರಾಜಪ್ಪ

Trending videos

Back to Top