CONNECT WITH US  

ಶರೀಫ‌ರ ತತ್ವಪದದಲ್ಲಿ ಭಾವೈಕ್ಯತೆ ಸಂದೇಶ

ಚಿಂತಾಮಣಿ: ಸಂತ ಶಿಶುನಾಳ ಶರೀಫ‌ರು ಭಾವೈಕ್ಯತೆ ಸಂಕೇತವಾಗಿದ್ದಾರೆ. ಬಾಲ್ಯದಿಂದಲೇ ಹಿಂದೂ ಧರ್ಮ ಗ್ರಂಥಗಳ ಪ್ರಭಾವಕ್ಕೆ ಒಳಗಾಗಿದ್ದರು. ಗುರು ಗೋವಿಂದಭಟ್ಟರ ಶಿಷ್ಯರಾಗಿ ಬದುಕಿನ ತತ್ವ-ಸಿದ್ಧಾಂತ
ಅರಿತು ಸಮಾಜ ಸುಧಾರಣೆ ಹಾಗೂ ಸಾಮರಸ್ಯಕ್ಕಾಗಿ ಶ್ರಮಿಸಿದರು ಎಂದು ಬರಹಗಾರ ಟಿ.ಎಂ.ಈಶ್ವರ್‌ಸಿಂಗ್‌
ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಕನ್ನಡ ಸಾಹಿತ್ಯ ಬಳಗದ ವತಿಯಿಂದ ನಗರದ ಮಾಳಪಲ್ಲಿ ಹೊಸ ಬಡಾವಣೆಯಲ್ಲಿರುವ ಬಳಗದ ಕಾರ್ಯಾಲಯದಲ್ಲಿ ಆಯೋಜಿಸಿದ್ದ 25ನೇ ಕವಿನೆನಪು ಕಾರ್ಯಕ್ರಮದಲ್ಲಿ ಶಿಶು ನಾಳ ಶರೀಫ‌ರ ಕುರಿತು ಅವರು
ಉಪನ್ಯಾಸ ನೀಡಿದರು.

ಅಮರ: ಮಾನವ ಧರ್ಮದ ಆಧಾರದಲ್ಲೇ ಜಗತ್ತಿನ ಎಲ್ಲಾ ಧರ್ಮಗಳೂ ನಿಂತಿವೆ ಎಂಬ ನಿಲುವನ್ನು ಹೊಂದಿದ್ದ ಶರೀಫ‌ರು ತಮ್ಮ ಜೀವನದಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಪ್ರಾಮಾಣಿಕರಾಗಿ ಬದುಕು ಸಾಗಿಸಿ
ದರು. ಮಾನವೀಯ ಹಾಗೂ ಮೌಲ್ವಿಕ ವಿಚಾರಗಳನ್ನೊಳಗೊಂಡ ಹಲವಾರು ತತ್ವಪದ ಹಾಗೂ ಕೀರ್ತನೆಗಳನ್ನು ರಚಿಸಿ ಹಾಡುವುದರ ಮೂಲಕ ಕೋಮು ಸಾಮರಸ್ಯ ಮತ್ತು ಭಾವೈಕ್ಯತೆಯ ಸಂದೇಶವನ್ನು ಸಾರಿ ಅಸಂಖ್ಯಾತ ಜನರ ಜನ ಮಾನಸದಲ್ಲಿ ಅಮರರಾಗಿ ಉಳಿದಿದ್ದಾರೆಂದು ಶ್ಲಾಘಿಸಿದರು.

ಸಾಹಿತ್ಯ ಸರ್ವಕಾಲಿಕ: ಸಾಹಿತಿ ನಾಗೇಶ್‌ ಎಸ್‌.ಕಂಚಿ ಮಾತನಾಡಿ, ಕನ್ನಡ ನಾಡಿನ ಜನರಿಗೆ ಶರೀಫ್ ಅಜ್ಜ
ಎಂದೇ ಪರಿಚಿತರಾದ ಅವರು ಜನ ಸಾಮಾನ್ಯರಿಗೂ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ಸುಸಲಿತ, ಅರ್ಥ
ಪೂರ್ಣ, ಕಾಲಾತೀತವೂ ಆದ ಸಾಹಿತ್ಯವನ್ನು ರಚಿಸಿದರು. ಜನರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ
ಕೊಳ್ಳಬೇಕೆಂದು ಸಲಹೆ ನೀಡಿದರು.

ಪರಿವರ್ತನೆ: ಬಳಗದ ಗೌರವಾಧ್ಯಕ್ಷ ಬಿ.ವಿ.ರಾಮಚಂದ್ರಾರೆಡ್ಡಿ ಮಾತನಾಡಿ, ಮಹಾಪುರುಷರ ವಿಚಾರಧಾರೆ, ತತ್ವ- ಸಿದ್ಧಾಂತಗಳನ್ನು ತಿಳಿದುಕೊಂಡು ಅನುಕರಿಸಿದರೆ ಜನರಲ್ಲಿ ಸಾಕಷ್ಟು ಪರಿವರ್ತನೆಯಾಗಿ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಹನೆ, ಸಹಕಾರ, ಭಾತೃತ್ವ, ಸೋದರತೆ, ಸಮಾನತೆಗಳು ನೆಲಗೊಳ್ಳುತ್ತದೆ ಎಂದು ತಿಳಿಸಿದರು. 

 ಈ ಸಂದರ್ಭದಲ್ಲಿ ಎಸ್‌ಎಫ್ಎಸ್‌ ಸುರೇಶ್‌, ನಂಜಪ್ಪರೆಡ್ಡಿ, ಎನ್‌.ಸೀತಮ್ಮ, ರುಕ್ಮಿಣಿಯಮ್ಮ, ಶಾಂತಮ್ಮ ಮತ್ತಿತರರು ಹಲವು ತತ್ವ ಪದಗಳನ್ನು ಹಾಡಿ ಶರೀಫ‌ರಿಗೆ ಗಾನ ನಮನ ಸಲ್ಲಿಸಿದರು.

ಈ ವೇಳೆ ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎನ್‌.ಮುನಿಕೃಷ್ಣಪ್ಪ, ಸಾಹಿತ್ಯ ಬಳಗದ ಜಿ.ವಿ.ರಾಮಕೃಷ್ಣ, ಜಿ.ಅಶ್ವತ್ಥ ನಾರಾಯಣರೆಡ್ಡಿ, ಶಿ.ಮ.ಮಂಜುನಾಥ, ಕೆ.ಎಸ್‌.ನೂರುಲ್ಲಾ ಇದ್ದರು.

Trending videos

Back to Top