CONNECT WITH US  

ವಿದ್ಯಾರ್ಥಿಗಳಿಗೆ ಘಾಸಿ ಮಾಡಿದ ಸರ್ಕಾರ

ಚಿಕ್ಕಬಳ್ಳಾಪುರ: ಪ.ಜಾ ಹಾಗೂ ಪ.ಪ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಕೊಟ್ಟು ಸಾಮಾನ್ಯ ವಿದ್ಯಾರ್ಥಿಗಳಿಗೆ ಕೊಡದೇ ರಾಜ್ಯ ಸಮ್ಮಿಶ್ರ ಸರ್ಕಾರ ವಿದ್ಯಾರ್ಥಿಗಳ ಮನಸ್ಸಿಗೆ ಘಾಸಿ ಮಾಡಿದೆ ಎಂದು ಮೈತ್ರಿ ಸರ್ಕಾರದ ಧೋರಣೆಗೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಬೇಸರ ವ್ಯಕ್ತಪಡಿಸಿದರು.

ನಗರದ ಹೊರ ವಲಯದ ಅಣಕನೂರು ಬಳಿ ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಿಂದ 3.25 ಕೋಟಿ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರ ವಿದ್ಯಾರ್ಥಿ ವಸತಿ ನಿಲಯದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿ, ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪ.ಜಾ ಹಾಗೂ ಪ.ಪ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ನೀಡಲು ಅನುದಾನ ಮೀಸಲಿಟ್ಟಿದ್ದರು. 

ಬಳಿಕ ಕಳೆದ ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಸಾಮಾನ್ಯ ವರ್ಗದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ನೀಡುವುದಾಗಿ ಘೋಷಿಸಿದರು. ಆದರೆ ರಾಜ್ಯದಲ್ಲಿ ಚುನಾವಣೆ ಬಳಿಕ ರಾಜ್ಯದಲ್ಲಿ ಅನಿವಾರ್ಯವಾಗಿ ರಚನೆಗೊಂಡಿರುವ ಸಮ್ಮಿಶ್ರ ಸರ್ಕಾರ ಸಾಮಾನ್ಯ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವ ಭರವಸೆಯನ್ನು ಹುಸಿಗೊಳಿಸಿದೆ. 

ಇದರಿಂದ ಎಲ್ಲೂ ಒಂದು ಕಡೆ ಒಂದು ವರ್ಗದ ವಿದ್ಯಾರ್ಥಿಗಳು ಪಾಸ್‌ ಕೊಟ್ಟ ಮತ್ತೂಂದು ವರ್ಗದ ವಿದ್ಯಾರ್ಥಿಗಳಿಗೆ ಉಚಿಯ ಬಸ್‌ಪಾಸ್‌ ಕೊಡದಿದ್ದರೆ ಸರ್ಕಾರವೇ ಜಾತಿ ತಾರರಾಮ್ಯ ಮಾಡದಂತಾಗುತ್ತದೆ. ಎಳೆ ವಯಸ್ಸಿನ ಮಕ್ಕಳ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ. ಎಲ್ಲಾ
ವರ್ಗದ ವಿದ್ಯಾರ್ಥಿಗಳಿಗೂ ಸರ್ಕಾರ ಉಚಿತ ಬಸ್‌ ಪಾಸ್‌ ಕೊಡಬೇಕಿತ್ತು ಎಂದು ತಿಳಿಸಿದರು. 

ತೈಲ ಬೆಲೆ ಏರಿಕೆಗೂ ಕಿಡಿ: ಸಮ್ಮಿಶ್ರ ಸರ್ಕಾರದಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಸುಂಕ ಹೆಚ್ಚಳದಿಂದ ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತದೆ. ಅಕ್ಕಿ ಭಾಗ್ಯದಲ್ಲೂ 2 ಕೆಜಿ ಕಡಿತಗೊಳಿಸಿದ ಬಗ್ಗೆ ಖುದ್ದು ಅಧಿವೇಶನದಲ್ಲಿ ಮತನಾಡಿದ್ದೇನೆ. ಅಕ್ಕಿ ಕಡಿತ ಮಾಡದ ಬಗ್ಗೆ ಮುಖ್ಯಮಂತ್ರಿಗಳೂ ಸದನದಲ್ಲಿ ಭರವಸೆ ನೀಡಿದ್ದಾರೆ. ರೈತರ ಸಾಲಮನ್ನಾ ಮಾಡಲು ಸಮ್ಮಿಶ್ರ ಸರ್ಕಾರ ಕೆಲವು ಯೋಜನೆಗಳಿಗೆ ಹಣ ಕಡಿತ ಮಾಡಿ ರೈತರ ಹೊರೆ ಇಳಿಸಲು ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ ಎಂದು ದೂರಿದರು.
 
ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ: ಇದೇ ವೇಳೆ ಅಣಕನೂರು ಸಮೀಪ 3.25 ಕೋಟಿ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಶಾಸಕ ಸುಧಾಕರ್‌, ಜಿಲ್ಲಾ ಕೇಂದ್ರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಡೆಸುತ್ತಿರುವ ಹಾಸ್ಟಲ್‌ಗ‌ಳಿಗೆ ಸ್ವಂತ ಕಟ್ಟಡ ಇಲ್ಲದೇ ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ವಿದ್ಯಾರ್ಥಿ ನಿಲಯಗಳನ್ನು ನಿರ್ವಹಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಮೂಲ ಸೌಕರ್ಯಗಳು ಸಿಗದೇ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಅವರ ವಿದ್ಯಾಭ್ಯಾಸಕ್ಕೂ ಪೂರಕ ವಾತಾವರಣ ಬಾಡಿಗೆ ಕಟ್ಟಡಗಳಲ್ಲಿ ಇಲ್ಲವಾಗಿದೆ. ಹಿಂದುಳಿದ ವರ್ಗಗಳ ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಏಳಿಗೆ ಆಗುವುದರ ಜತೆಗೆ ಸಮಾಜ ಕೂಡ ಏಳಿಗೆ ಆಗುತ್ತದೆ. ಶಿಕ್ಷಣವೇ ಸಾದನೆ ಆಗಬೇಕು. ಇಂದಿನ ದಿನಗಳಲ್ಲಿ ಹಣ, ಆಸ್ತಿ ಮಾಡುವುದು ಕೂಡ ಕಷ್ಟವಾಗಿದೆ. ಪ್ರತಿಯೊಬ್ಬರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. 

ಗುಣಮಟ್ಟ ಇಲ್ಲದಿದ್ದರೆ ಬಿಲ್‌ ಪಾವತಿ ಇಲ್ಲ: ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಇಲ್ಲ ದಿದ್ದರೆ ಬಿಲ್‌ ಪಾವತಿ ಮಾಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಖಡಕ್‌ ಎಚ್ಚರಿಕೆ ನೀಡಿ ಶಾಸಕರು, ಇಲಾಖೆ ಅಧಿಕಾರಿಗಳು ಕೂಡ ಕಟ್ಟಡ ಗುಣಮಟ್ಟದ ವಿಚಾರದಲ್ಲಿ ನಿಗಾ ವಹಿಸಬೇಕು. ಕಳಪೆ ಕಾಮಗಾರಿ ಕಂಡು ಬಂದರೆ ಅಧಿಕಾರಗಳ ಮೇಲೆಯು ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ 10, 12 ತಿಂಗಳಲ್ಲಿ
ಕಾಮಗಾರಿ ಪೂರ್ಣಗೊಳ್ಳಬೇಕೆಂದರು. 

ಈ ವೇಳೆ ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳುಕುಂಟೆ ಕೃಷ್ಣವ ಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಮೋಹನ್‌, ಮುಖಂಡರಾದ ನಾರಾಯಣಸ್ವಾಮಿ, ಅಣಕನೂರು ವೆಂಕಟೇಶ್‌ ಸೇರಿದಂತೆ ಪಟ್ರೇನಹಳ್ಳಿ ಗ್ರಾಪಂ ವ್ಯಾಪ್ತಿಯ ಮುಖಂಡರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. 

ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ 
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರವೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ಕೊಡುತ್ತದೆಯೆಂದು ಹೇಳಿ, ನಮ್ಮ ಟ್ರಸ್ಟ್‌ ವತಿಯಿಂದ ಯಾರಿಗೂ ಈ ವರ್ಷ ಉಚಿತ ಬಸ್‌ಪಾಸ್‌ ಕೊಡಲು ಸಾಧ್ಯವಾಗಲಿಲ್ಲ. ಎಸ್‌ಸಿ, ಎಸ್‌ಟಿ ವರ್ಗದ ಮಕ್ಕಳಿಗೆ ಸರ್ಕಾರವೇ ಉಚಿತ ಬಸ್‌ಪಾಸ್‌ ಕೊಡುತ್ತಿರುವುದರಿಂದ ಮುಂದಿನ ವರ್ಷದಿಂದ ಕ್ಷೇತ್ರದ ಸಾಮಾನ್ಯ ವರ್ಗದ ಎಲ್ಲಾ ವಿದ್ಯಾರ್ಥಿಗಳಿಗೆ ಟ್ರಸ್ಟ್‌ ವತಿಯಿಂದ ಉಚಿತ ಬಸ್‌ಪಾಸ್‌ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು. 

ಪಟ್ರೇನಹಳ್ಳಿ ನಗರಸೇರ್ಪಡೆಗೆ ಪರ, ವಿರೋಧ..
ಭವಿಷ್ಯದ ಅಭಿವೃದ್ಧಿ ದೂರದೃಷ್ಠಿಯಿಂದ ಬರುವ ದಿನಗಳಲ್ಲಿ ಪಟ್ರೇನಹಳ್ಳಿ ಹಾಗೂ ಅಣಕನೂರು ಸೇರಿದಂತೆ ಜಿಲ್ಲಾ ಕೇಂದ್ರಕ್ಕೆ ಹತ್ತಿರ ಇರುವ ಗ್ರಾಮಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಶಾಸಕ ಸುಧಾಕರ್‌ ಹೇಳಿದರು. ಈ ವೇಳೆ ಕೆಲವರು ಪಟ್ರೇನಹಳ್ಳಿ ಸೇರಿಸಬೇಡಿ ಸಾರ್‌.. ಗ್ರಾಪಂ ವ್ಯಾಪ್ತಿಯಲ್ಲಿಯೆ ಇರಲಿ ಎಂದರು. ಆದರೆ ಅದಕ್ಕೆ ಒಪ್ಪದ ಸುಧಾಕರ್‌ ದೂರದೃಷ್ಠಿ ಇಟ್ಟುಕೊಂಡು ಚಿಕ್ಕಬಳ್ಳಾಪುರ ನಗರಸಭೆಗೆ ಹತ್ತಿರ ಇರುವ ಹಳ್ಳಿಗಳನ್ನು ಸೇರ್ಪಡೆ ಮಾಡಲಾಗುವುದು. ಈಗಾಗಲೇ ಈ ಸಂಬಂಧ ರೂಪರೇಷಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

Trending videos

Back to Top