CONNECT WITH US  

ಮಾವು ಬೆಂಬಲ ಬೆಲೆ ವಿತರಣೆ ಪ್ರಕ್ರಿಯೆ ಪ್ರಾರಂಭ

ಚಿಂತಾಮಣಿ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾವು ಬೆಳೆಗಾರರು ಹೆಚ್ಚಿದ್ದಾರೆ. ಈ ಬಾರಿ ಮಾವು ಬೆಳೆಗೆ ಸೂಕ್ತ ಬೆಲೆ ದೊರೆಯದೆ, ತಾಲೂಕಿನ ಬೆಳೆಗಾರರು ಸಂಕಷ್ಟದಲ್ಲಿದ್ದರು. ಇದಕ್ಕಾಗಿ ಸರ್ಕಾರ ನಷ್ಟಹೊಂದಿದ ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಬೆಂಬಲ ಬೆಲೆ ವಿತರಣೆಗೆ ಪ್ರಕ್ರಿಯೆ ಪ್ರಾರಂಭವಾಗಿದೆ. ತಾಲೂಕಿನ ಬೆಳೆಗಾರರು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರದ ಎಪಿಎಂಸಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಯರ್ರಯ್ಯಗಾರನಹಳ್ಳಿ ರವಿ ಮನವಿ ಮಾಡಿದರು.

ಶನಿವಾರ ನಗರದ ಮಾವು ಮಾರುಕಟ್ಟೆಯಲ್ಲಿ ಮಾವು ಬೆಳೆಯನ್ನು ಪರಿಶೀಲಿಸಿದ ಅವರು, ಬೆಳೆಯ ವಿವರ ಪಡೆದ ಬಳಿಕ ಮಾವು ಬೆಂಬಲ ಬೆಲೆಗೆ ಅರ್ಜಿ ವಿತರಣೆ ಕೇಂದ್ರ ಪ್ರಾರಂಭಿಸಿದ ಅವರು ಮಾತನಾಡಿ, ತಾಲೂಕಿನಲ್ಲಿ ರೈತರು ಹೆಚ್ಚು ಮಾವು ಬೆಳೆ ಬೆಳೆದಿದ್ದು, ಶೀಘ್ರದಲ್ಲಿ ಬೆಳೆಗಾರರು
ಮಾರುಕಟ್ಟೆಗೆ ತಮ್ಮ ಬೆಳೆ ತಂದು ಬೆಂಬಲ ಬೆಲೆ ಪಡೆಯಬೇಕು. ಕಡಿಮೆ ಬೆಲೆಗೆ ಮಾರಾಟವಾದಾಗ ಬೆಂಬಲ ಬೆಲೆ ಪಡೆಯುವ ರೈತರು ಮಾವು ಬೆಳೆಗೆ ಸಂಬಂಧಿಸಿದ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕ, ಭಾವಚಿತ್ರಗಳೊಂದಿಗೆ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು. 

ಬೆಳೆಗಾರನಿಗೆ ನೆಮ್ಮದಿ: ಸರ್ಕಾರದ ಸೂಚನೆಯಂತೆ ಜು.14ರಿಂದ ಮಾರುಕಟ್ಟೆಯಲ್ಲಿ ಮಾರಾಟವಾದ ಮಾವಿಗೆ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರಲ್ಲಿ ಒಂದೊಂದು ಬೆಳೆಗೆ ಒಂದೊಂದು ರೀತಿಯ ಸಹಾಯಧನವನ್ನು ನಿಗದಿ ಮಾಡಿದೆ. ಇನ್ನೂ ರೈತರ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದೆ ಕಂಗಾಲಾಗಿದ್ದ ರೈತನಿಗೆ ಈಗ ಸರ್ಕಾರ ಸೂಚಿಸಿರುವ ಬೆಂಬಲ ಬಳೆಯಿಂದ ಸ್ವಲ್ಪ ನೆಮ್ಮದಿ ದೊರೆತಿದೆ. ಹಾಕಿದ್ದ ಬಂಡವಾಳ ಕೈ ಸೇರುತ್ತದೆ ಎಂಬ
ಭರವಸೆಯಲ್ಲಿ ಬೆಳೆಗಾರ ಒಂದಿಷ್ಟು ನೆಮ್ಮದಿ ಪಡೆದಿದ್ದಾನೆ ಎಂದರು.

ಪ್ರಸ್ತುತ ಮಾರಾಟಕ್ಕೆ ಬೆಂಬಲ ಬೆಲೆ: ಮಾವು ಬೆಳೆಗಾರರಿಗಾಗಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ, ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಕೇಂದ್ರದಲ್ಲಿ ಕೇವಲ
ಜು.14ರಿಂದ ಮಾರುಕಟ್ಟೆಯಲ್ಲಿ ಮಾರಾಟವಾದ ಬೆಳೆಗಾರರಿಗೆ ಮಾತ್ರ ಅನ್ವಯವಾಗುತ್ತದೆ. ಈ ಹಿಂದೆ ಮಾರಾಟ ಮಾಡಿದ ಬೆಳೆಗಾರರಿಗೆ ಬೆಂಬಲ ಬೆಲೆ ಇಲ್ಲದಾಗಿರುವುದು ಖೇದಕರ ಸಂಗತಿಯಾಗಿದೆ ಎಂದು ತಿಳಿಸಿದರು. 

ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಕಿರಣ್‌ ಕುಮಾರ್‌, ತೋಟಗಾರಿಕೆ ಇಲಾಖೆಯ ರಾಜೇಶ್‌, ಗಂಗಪ್ಪ, ಎಪಿಎಂಸಿ ಸದಸ್ಯರಾದ ವೆಂಕಟಾಚಲಪತಿ, ತಳಗವಾರ ರೇಣುಕಾ ಸೋಮಶೇಖರ್‌, ಉಪ್ಪಾರಪೇಟೆ ಗ್ರಾಪಂ ಉಪಾಧ್ಯಕ್ಷ ಮುಸ್ತಾಪ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

Trending videos

Back to Top