CONNECT WITH US  

ನಿಲ್ಲದ ಸಚಿವ, ಶಾಸಕರ ನಡುವಿನ ಮುಸುಕಿನ ಗುದ್ದಾಟ

ಚಿಕ್ಕಬಳ್ಳಾಪುರ: ಜಿಲ್ಲೆಯ ಉಸ್ತುವಾರಿ ಸಚಿವರೆಂದು ಬಿಂಬಿತವಾಗುತ್ತಿರುವ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕರು ಆಗಿರುವ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರೆಡ್ಡಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್‌ ನಡುವಿನ ಆತಂರಿಕ ಮುಸುಕಿನ ಗುದ್ದಾಟ ಮತ್ತೆ ಮುಂದುವರಿದಿಯೆ? ಹೌದು ಇತ್ತೀಚೆಗೆ ನಗರದ ಹೊರ ವಲಯದ ಅಣಕನೂರು ಸಮೀಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬರೋಬ್ಬರಿ 3.25 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ವಿವಿಧಡೆಗಳಲ್ಲಿ ಅಳವಡಿಸಿದ್ದ ಪ್ಲೆಕ್ಸ್‌, ಬ್ಯಾನರ್‌ಗಳಲ್ಲಿ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಭಾವಚಿತ್ರ ಕೈ
ಬಿಟ್ಟಿರುವುದು ಇದೀಗ ಇತಂಹದೊಂದು ಪ್ರಶ್ನೆ ಮತ್ತೆ ಉದ್ಬವಿಸುವಂತೆ ಮಾಡಿದೆ. 

ಇಬ್ಬರ ನಡುವೆ ವೈಮನಸ್ಸು: ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೊಂಡ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ಜಿಲ್ಲಾ ಕೋಟಾದಡಿ ಗೌರಿಬಿದನೂರು ಶಾಸಕ ಎನ್‌. ಎಚ್‌.ಶಿವಶಂಕರೆಡ್ಡಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ನಡುವೆ ತೀವ್ರ ಪೈಪೋಟಿ ನಡೆದು ರಾಜಕೀಯವಾಗಿ ಸಾಕಷ್ಟು ಗಮನ ಸೆಳೆದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಡಾ.ಕೆ.ಸುಧಾಕರ್‌ಗೆ ಮಂತ್ರಿ ಆಗುವ ಅವಕಾಶ ಕೈ ತಪ್ಪಿ ವಿಧಾನಸಭೆಗೆ ಐದು ಬಾರಿ ಶಾಸಕರಾಗಿರುವ ಎನ್‌.ಎಚ್‌.ಶಿವಶಂಕರೆಡ್ಡಿಗೆ ಸಚಿವ ಸ್ಥಾನ ದೊರೆಯಿತು. 
ಈಗಾಗಿ ಇಬ್ಬರ ನಡುವೆ ಮತ್ತುಷ್ಟು ವೈಮನಸ್ಸು ಬೆಳೆದಿತ್ತು.

ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದಿದ್ದ ಶಾಸಕ: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಆಗಿದ್ದಕ್ಕೆ ತೀವ್ರ ಅಸಮಾಧಾನ ಹೊರ ಹಾಕಿದ್ದ ಅದರಲ್ಲೂ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ತೀವ್ರ ಆಕ್ರೋಶಗೊಂಡಿದ್ದ ಶಾಸಕ ಡಾ.ಕೆ.ಸುಧಾಕರ್‌ ನಗರದಲ್ಲಿ ಕ್ಷೇತ್ರದ ಮತದಾರರಿಗೆ ಹಮ್ಮಿಕೊಂಡಿದ್ದ ಕೃತಜ್ಞತೆ ಸಮಾವೇಶದಲ್ಲಿ ಮಾತನಾಡಿ, ಜಿಲ್ಲೆಯಿಂದ ಸಚಿವರಾಗಿರುವ ಶಿವಶಂಕರರೆಡ್ಡಿ ಜತೆ ಯಾವುದೇ ಕಾರಣಕ್ಕೂ ವೇದಿಕೆ ಹಂಚಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಇತ್ತೀಚೆಗೆ ನಗರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಸಚಿವ ಶಿವಶಂಕರರೆಡ್ಡಿ ಹಾಗೂ ಶಾಸಕ ಡಾ,ಕೆ.ಸುಧಾಕರ್‌ ಒಂದೇ ವೇದಿಕೆ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದರು.
 
ಬ್ಯಾನರ್‌ನಲ್ಲಿ ಕೃಷಿ ಸಚಿವರ ಭಾವಚಿತ್ರವಿಲ್ಲ: ಇದೇ ವೇಳೆ ಅಭಿವೃದ್ಧಿ ಬೇರೆ ರಾಜಕಾರಣ ಬೇರೆ ಎಂದು ಸಚಿವರ ಜೊತೆಗೆ ವೇದಿಕೆ ಹಂಚಿಕೊಂಡಿನ್ನು ಶಾಸಕ ಸುಧಾಕರ್‌ ಸಮರ್ಥಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನಾ ಸಮಾರಂಭಕ್ಕೆ ಹಾಕಲಾಗಿದ್ದ ಪ್ಲೆಕ್ಸ್‌, ಬ್ಯಾನರ್‌ಗಳಲ್ಲಿ ಮಾತ್ರ ರಾಜ್ಯ ಕಾಂಗ್ರೆಸ್‌, ನಾಯಕರ, ಸಚಿವರ ಭಾವಚಿತ್ರಗಳನ್ನು ಹಾಕಿದ್ದರೂ ಸಹ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರೆಡ್ಡಿ ಭಾವಚಿತ್ರ ಮಾತ್ರ ಹಾಕದಿರುವುದು ಮಾತ್ರ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಸಚಿವರ ಹಾಗೂ ಶಾಸಕರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿಯೆ ಎಂಬ ಚರ್ಚೆ ಈಗ ಪ್ಲೆಕ್ಸ್‌, ಬ್ಯಾನರ್‌ಗಳಲ್ಲಿ ಸಚಿವರ ಪೋಟೋ ಕೈ ಬಿಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ

 ಕಾಗತಿ ನಾಗರಾಜಪ್ಪ


Trending videos

Back to Top