CONNECT WITH US  

ಬಿದಿರು ಬೆಳೆಸಲು ಪೈಲಟ್‌ ಯೋಜನೆ ಅನುಷ್ಠಾನ

ಚಿಕ್ಕಬಳ್ಳಾಪುರ: ಅಂತರ್ಜಲಕ್ಕೆ ಮಾರಕವಾಗಿರುವ ನೀಲಿಗಿರಿ ಮರಗಳನ್ನು ತೆರವುಗೊಳಿಸಿ, ಅದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಹಾಗೂ ರೈತರಿಗೆ ಹೆಚ್ಚು ಲಾಭದಾಯಕವಾಗಿರುವ ಬಿದಿರನ್ನು ಬೆಳೆಸಲು ಜಿಲ್ಲೆಗೆ ಶೀಘ್ರದಲ್ಲಿ ಪೈಲಟ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರೆಡ್ಡಿ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಕೃಷಿ ಇಲಾಖೆ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿ, ನೀಲಿಗಿರಿ ಮರಗಳು ಜಿಲ್ಲೆಯಲ್ಲಿ ವ್ಯಾಪಕವಾಗಿರುವುದರಿಂದ ಅಂತರ್ಜಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನೀಲಿಗಿರಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ರೈತರಲ್ಲಿ ವ್ಯಾಪಕವಾಗಿ ಅರಿವು ಮೂಡಿಸಿ ಬಿದಿರು ಬೆಳೆಸಲು ಉತ್ತೇಜನ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಬಿದಿರು ಮರಗಳು ರೈತರಿಗೆ ಹೆಚ್ಚು ಲಾಭದಾಕಯವಾಗಿವೆ. ವೈಜ್ಞಾನಿಕ ಸಂಶೋಧನೆ ಮೂಲಕ ಅನೇಕ ರೀತಿಯ ಬಿದಿರು ತಳಿಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೂರು ತಿಂಗಳಿಗೆ ಬೆಳೆ ಬರುತ್ತಿವೆ.

ಜಿಲ್ಲೆಯಲ್ಲಿನ ನೀಲಿಗಿರಿ ಮರಗಳನ್ನು ತೆರವುಗೊಳಿಸಿ ಬಿದಿರು ಬೆಳೆಸುವ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸಲು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಾಜ್ಯದಲ್ಲಿ ಪೈಲಟ್‌ ಯೋಜನೆಯಾಗಿ ತೆಗೆದುಕೊಂಡು ಬಿದಿರು ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಈ ಸಂಬಂಧ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬಿದಿರು ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಭೂ ಸಮೃದ್ಧಿಗೆ ಆದ್ಯತೆ ನೀಡಿ: ಭೂಮಿಯ ಫ‌ಲವತ್ತತೆ ಕಾಪಾಡಬೇಕಿದೆ. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಭೂ ಸಮೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸ ಬೇಕು. ಆ ಮೂಲಕ ಮಣ್ಣಿನ ಸವಕಳಿ ತಡೆಯುವುದು, ರೈತರ ಹೊಲಗಳಲ್ಲಿ ಬದುಗಳ ನಿರ್ಮಾಣ, ಜಲ ಮೂಲಗಳ ಸಂರಕ್ಷಣೆಗೆ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿ ಕೊಳ್ಳುವಂತೆ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರೈತ ಕೇಂದ್ರಗಳಿಗೆ ಭೇಟಿ ಕೊಡಿ: ರೈತ ಸಂಪರ್ಕ ಕೇಂದ್ರಗಳು ಕೇವಲ ರೈತರಿಗೆ ರಸಗೊಬ್ಬರ ಅಥವಾ ಬಿತ್ತನೆ ಬೀಜ ವಿತರಣೆಗೆ ಮಾತ್ರ ಸಿಮೀತವಾಗಬಾರದು. ಕೇಂದ್ರಗಳಿಗೆ ತಾಲೂಕು ಮಟ್ಟದಲ್ಲಿರುವ ರೇಷ್ಮೆ, ಪಶು ಸಂಗೋಪಾನೆ, ಹೈನುಗಾರಿಕೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಕೃಷಿ ವಿಜ್ಞಾನಿಗಳು ಕಾಲಕಾಲಕ್ಕೆ ಭೇಟಿ ನೀಡಬೇಕು. ಇಲಾಖೆಗಳಲ್ಲಿ ಸಿಗುವ ಸಾಲ, ಸೌಲಭ್ಯಗಳ ಬಗ್ಗೆ ರೈತರಿಗೆ ಸಮರ್ಪಕವಾಗಿ ಮಾಹಿತಿ ಒದಗಿಸಬೇಕು. ಸಮಗ್ರ ಕೃಷಿಗೆ ಪೂರಕವಾದ ಮಾಹಿತಿ ನೀಡುವ ಕೇಂದ್ರಗಳಾಗಿ ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸಿದಾಗ ರೈತರಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದರು.

ಕೃಷಿ ಹೊಂಡಗಳ ನಿರ್ಮಾಣಕ್ಕೆ ಒತ್ತು: ಜಿಲ್ಲಾ ಜಂಟಿ ಕೃಷಿ ನಿದೇರ್ಶಕ ಡಾ.ಕೆ.ಮಲ್ಲಿಕಾರ್ಜುನ್‌ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 11,672 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಈ ವರ್ಷ ಒಟ್ಟು 2,900 ಗುರಿ ಇದೆ. ಈಗಾಗಲೇ 317 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಸಚಿವ ಶಿವಶಂಕರ ರೆಡ್ಡಿ, ಕೃಷಿಹೊಂಡಗಳ ನಿರ್ಮಾಣಕ್ಕೆ ಎಷ್ಟೇ ಬೇಡಿಕೆ ಇದ್ದರೂ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡಗಳಲ್ಲಿ ಬಿದ್ದು ರೈತರು, ಮಹಿಳೆಯರು, ಮಕ್ಕಳು ಹೆಚ್ಚಿಗೆ ಮೃತ ಪಡುತ್ತಿರುವುದರಿಂದ ಹೊಂಡಗಳ ಸುತ್ತ ಸೋಲಾರ್‌ ತಂತಿ ಬೇಲಿ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಹನಿ ನೀರಾವರಿ ಯೋಜನೆಯಡಿ ನೀಡುತ್ತಿರುವ ಪೈಪ್‌ಗ್ಳು ಪ್ಲೋರೈಡ್‌ ಪ್ರಮಾಣದ ಹೆಚ್ಚಳದಿಂದ ವರ್ಷ ಕೂಡ ಬಾಳಿಕೆ ಬರುತ್ತಿಲ್ಲ. ಗುಣ ಮಟ್ಟದ ಪೈಪ್‌ಗ್ಳು ವಿತರಿಸಿದರೆ, ರೈತರಿಗೆ ಹೆಚ್ಚಿನ ಲಾಭ ಆಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಕೂಡಲೇ ಗುಣಮಟ್ಟದ ಪೈಪ್‌ಗ್ಳ ವಿತರಣೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಒಂದೇ ತಾಸಿನಲ್ಲಿ ಪ್ರಗತಿ ಸಭೆ ಮುಕ್ತಾಯ: ಕೃಷಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಜಿಪಂ ಸಭಾಂಗಣದಲ್ಲಿ ಶನಿವಾರ ತಮ್ಮದೇ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಒಂದೇ ತಾಸಿನಲ್ಲಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯನ್ನು ಮುಗಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಜಿಪಂ ಸದಸ್ಯರು ಕೃಷಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರೂ ಈಗ ಕಾರ್ಯಕ್ರಮಗಳು ಜಾಸ್ತಿ ಇವೆ. ಮುಂದೆ ಸಭೆ ನಡೆಸೋಣ ಎಂದು ಹೇಳಿ ಸಭೆಗೆ ಇತೀಶ್ರೀ ಹಾಡಿದರು. ಇನ್ನೂ ಸಭೆಯಲ್ಲಿ ಸಚಿವರು ಕನ್ನಡಕ್ಕಿಂತ ಹೆಚ್ಚು ಆಂಗ್ಲ ಬಗ್ಗೆ ವ್ಯಾಮೋಹ ತೋರಿದ್ದು, ಗಮನ ಸೆಳೆಯಿತು. ಅಧಿಕಾರಿಗಳು ಕನ್ನಡದಲ್ಲಿ ಮಾತನಾಡಿದರು. ಸಚಿವರು ಮಾತ್ರ ಪದೇ ಪದೇ ಆಂಗ್ಲಭಾಷೆಗೆ ಮೊರೆಹೋದರು.

ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ, ಜಿಪಂ ಅಧ್ಯಕ್ಷ ಹೆಚ್‌.ವಿ. ಮಂಜುನಾಥ, ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ಕೃಷಿ ಇಲಾಖೆ ಆಯುಕ್ತ ಸತೀಶ್‌, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಗುರುದತ್‌ ಹೆಗ್ಗಡೆ, ಅಪರ ಜಿಲ್ಲಾಧಿಕಾರಿ ಡಾ.ಕೆ.ಎನ್‌. ಅನುರಾಧ, ಜಿಲ್ಲಾ

ಮಳೆ ಕೊರತೆ: ಬಿತ್ತನೆ ಕುಂಠಿತ ಸಭೆ ಆರಂಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ. ಮಲ್ಲಿಕಾರ್ಜುನ್‌, ಜಿಲ್ಲೆಯಲ್ಲಿ ಇದುವರೆಗೂ ನಡೆದಿರುವ ಬಿತ್ತನೆ ಪ್ರಮಾಣದ ಅಂಕಿ, ಅಂಶಗಳನ್ನು ನೀಡಿ ಇಲಾಖೆ ಹೊಂದಿರುವ 1.54 ಲಕ್ಷ ಹೆಕ್ಟೇರ್‌ ಪೈಕಿ ಇದುವರೆಗೂ ಕೇವಲ 58 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಗೊಂಡು ಶೇ.38ರಷ್ಟು ಪ್ರಗತಿ ಸಾಧಿಸಲಾಗಿದೆಯೆಂದರು. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬಿತ್ತನೆ ಪ್ರಮಾಣ ಕುಸಿದಿರುವುದಕ್ಕೆ ಕೃಷಿ ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದರು. ಶಿಡ್ಲಘಟ್ಟ ತಾಲೂಕಿನಲ್ಲಿ ಮಳೆ ಪ್ರಮಾಣ ತೀರಾ ಕುಸಿದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


Trending videos

Back to Top