CONNECT WITH US  

ಸೌಹಾರ್ದತೆ ಬಿಂಬಿಸುವ ದರ್ಗಾದಲ್ಲಿ ಉರುಸ್‌ ಸಂಭ್ರಮ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಹಿಂದೂ, ಮುಸ್ಲಿಂರ ಸೌಹಾರ್ದತೆಯನ್ನು ಬಿಂಬಿಸುವ ನಗರದ ಎಂ.ಜಿ. ರಸ್ತೆಯಲ್ಲಿನ ಹಜರತ್‌ ಸೈಯದ್‌ ಮಿಷ್ಕನ್‌ ಷಾ ಸೈಲಾನಿ ದರ್ಗಾದಲ್ಲಿ ವಾರ್ಷಿಕ ಉರುಸ್‌ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

ಭವ್ಯ ಮೆರವಣಿಗೆ: ಮೊದಲ ದಿನ ಉರುಸ್‌ ಪ್ರಯುಕ್ತ ಬುಧವಾರ ರಾತ್ರಿ ಇಡೀ ನಗರದ ಮುಖ್ಯ ರಸ್ತೆಗಳಲ್ಲಿ ಗಂದೋತ್ಸವದ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ವಿಜೃಂಭಣೆಯಿಂದ ನಡೆಯಿತು. ನಗರದ ಮುಸ್ಲಿಂ ಸಮುದಾಯ ನೂರಾರು ಮುಖಂಡರು,

ಯುವಕರು ಉರುಸ್‌ ನಡೆಯುತ್ತಿರುವ ದರ್ಗಾದಿಂದ ಊರಿನ ಗಂದೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ಮೆರವಣಿಗೆ ಸಾಗಿ ಬಂದ ರಸ್ತೆಗಳಲ್ಲಿ ವಿಶೇಷವಾಗಿ ಮಾಡಲಾಗಿದ್ದ ವಿದ್ಯುತ್‌ ದೀಪಾಲಂಕಾರ ಎಲ್ಲರ ಗಮನ ಸೆಳೆಯಿತು.

ದರ್ಗಾಗೆ ದೀಪಾಲಂಕಾರ: ಎರಡು ದಿನಗಳ ಉರುಸ್‌ ಕಾರ್ಯಕ್ರಮದ ಪ್ರಯುಕ್ತ ಹಜರತ್‌ ಸೈಯದ್‌ ಮಿಷ್ಕನ್‌ ಷಾ ಸೈಲಾನಿ ದರ್ಗಾದಲ್ಲಿ ವಿಶೇಷ ಹೂವಿನ ಲಂಕಾರ ಮಾಡಲಾಗಿತ್ತು. ದೇವರ ವಿವಿಧ ಬರಹವುಳ್ಳ ಅಲಂಕೃತ ವಾಹನಗಳೊಂದಿಗೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಮುಸ್ಲಿಂರು ಉರುಸ್‌ನಲ್ಲಿ  ಭಾಗವಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಉರುಸ್‌ ಹಿನ್ನೆಲೆಯಲ್ಲಿ ನಗರದ ಎಂಜಿ ರಸ್ತೆಯಲ್ಲಿ ವಿವಿಧ ತಿಂಡಿ, ತಿನಿಸುಗಳ ಮಾರಾಟ ಹಾಗೂ ಮಕ್ಕಳ ಆಟಿಕ ವಸ್ತುಗಳ ಮಾರಾಟ ಭರದಿಂದ ಸಾಗಿದೆ. ಗುರುವಾರ ರಾತ್ರಿ ಉರುಸ್‌ ಪ್ರಯುಕ್ತ ನಡೆದ ವಿಶೇಷ ಖಾವಲಿ ಗಾಯನ ಕಾರ್ಯಕ್ರಮವನ್ನು ಸಾವಿರಾರು ಜನ ಪಾಲ್ಗೊಂಡು ವಿಕ್ಷಿಸಿದರು.

ಬಿಗಿ ಪೊಲೀಸ್‌ ಭದ್ರತೆ: ಹಜರತ್‌ ಸೈಯದ್‌ ಮಿಷ್ಕನ್‌ ಷಾ ಸೈಲಾನಿ ದರ್ಗಾದಲ್ಲಿ ವಾರ್ಷಿಕ ಉರುಸ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಕಾರ್ತಿಕರೆಡ್ಡಿ ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ಪ್ರಭುಶಂಕರ್‌ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ನಗರದ ಅಯಕಟ್ಟಿನ ಸ್ಥಳಗಳಲ್ಲಿ ವಿಶೇಷ ಬಂದೋಬಸ್ತ್ ಕೈಗೊಂಡಿದ್ದಾರೆ.

Trending videos

Back to Top