CONNECT WITH US  

4 ವರ್ಷವಾದರೂ ನಗರಸಭೆಗೆ ಸ್ಥಾಯಿ ಸಮಿತಿ ಇಲ್ಲ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ನಗರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಅವಕಾಶ ಇದ್ದರೂ ಕಳೆದ ನಾಲ್ಕು ವರ್ಷಗಳಿಂದ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಡಳಿತ ಮಂಡಳಿ ಈ ಬಗ್ಗೆ ಮೀನಮೇಷ ಎಣಿಸುತ್ತಾ ಸ್ಥಾಯಿ ಸಮಿತಿ ರಚನೆ ಮಾಡುವ ಅಧಿಕಾರಕ್ಕೆ ಎಳ್ಳನೀರು ಬಿಟ್ಟಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ನಗರಸಭೆ ಹಾಗೂ ಪುರಸಭೆಗಳಲ್ಲಿ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಸ್ಥಾಯಿ ಸಮಿತಿ ರಚಿಸುವುದು ವಾಡಿಕೆ. ಇದು ಪೌರಾಡಳಿತ ನಿಯಮಗಳಲ್ಲೂ ಇದೆ. ಆದರೆ ಜಿಲ್ಲಾ ಕೇಂದ್ರದ ನಗರಸಭೆಯಲ್ಲಿ ಚುನಾವಣೆ ನಡೆದು ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷ ಕಳೆದು ಸ್ಥಳೀಯ ಸಂಸ್ಥೆಗಳ ಚುನಾವಣೆ ಭರದ ಸಿದ್ಧತೆ
ನಡೆಯುತ್ತಿದ್ದರೂ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ರಚನೆಯಾಗಬೇಕಿದ್ದ ಮಹತ್ವಕಾಂಕ್ಷಿ ಸ್ಥಾಯಿ ಸಮಿತಿ ರಚನೆಗೆ ಆಡಳಿತ ಮಂಡಳಿ ನಿರಾಸಕ್ತಿ ತೋರಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಪಾರದರ್ಶಕ ಆಡಳಿತಕ್ಕೆ ಸಮಿತಿ: ಪೌರಾಡಳಿತ ನಿಯಮಗಳ ಪ್ರಕಾರ ನಗರಸಭೆಯಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ರಚನೆಯಾಗುವ ಸ್ಥಾಯಿ ಸಮಿತಿಗೆ ತನ್ನದೇ ಆದ ಮಹತ್ವವಿದೆ. 7ರಿಂದ 15 ಸದಸ್ಯರನ್ನು ಸ್ಥಾಯಿ
ಸಮಿತಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಆದರೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಹಾಲಿ ಇರುವ ಆಡಳಿತ ಮಂಡಳಿ ಸ್ಥಾಯಿ ಸಮಿತಿ ರಚನೆಗೆ ಆಸಕ್ತಿ ತೋರುತ್ತಿಲ್ಲ. ಸಮಿತಿ ಅಧ್ಯಕ್ಷರ ಆಕಾಂಕ್ಷಿಗಳಲ್ಲಿ ಕೂಡ ಆಡಳಿತ ಮಂಡಳಿ ಧೋರಣೆಗೆ ಬೇಸರ ತಂದಿದೆ.

ಸಮಿತಿ ರಚನೆಯಿಂದ ನಗರಸಭೆ ಆಡಳಿತದಲ್ಲಿ ಪಾರದರ್ಶಕತೆ ಜತೆಗೆ ನಗರಸಭೆಯಲ್ಲಿ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳಬಹುದು. ವಿಶೇಷವಾಗಿ ಪ.ಜಾ ಹಾಗೂ ಪ.ಪ ಅಭಿವೃದ್ಧಿಗೆ ಸಮಿತಿ ಪಾತ್ರ ಮುಖ್ಯವಾಗುತ್ತದೆ. ಆದರೆ ನಗರಸಭೆಯಲ್ಲಿ ಕಳೆದ 4 ವರ್ಷಗಳಿಂದ ಸ್ಥಾಯಿ ಸಮಿತಿ ರಚನೆಗೆ ಮುಂದಾಗದೇ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 

ಸ್ಥಾಯಿ ಸಮಿತಿ ಕೆಲಸವೇನು? ನಗರಸಭೆಯಲ್ಲಿ ರಚನೆಗೊಳ್ಳುವ ಸ್ಥಾಯಿ ಸಮಿತಿಗೆ ನಗರಸಭೆ ವ್ಯಾಪ್ತಿಯಲ್ಲಿ ನೈರ್ಮಲ್ಯ, ಆರೋಗ್ಯದ ಬಗ್ಗೆ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರವಿದೆ. ಜತೆಗೆ ನಗರಸಭೆ ಅಧಿಕಾರಿಗಳ ಜತೆ ಸಭೆ ನಡೆಸಿ ಕಾರ್ಯಕ್ರಮ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಬಹುದು. ಜತೆಗೆ ಪ.ಜಾ, ಪ.ಪ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಯೋಜನೆ, ಕಾರ್ಯ ಕ್ರಮ ರೂಪಿಸಿ ಕ್ರಿಯಾ ಯೋಜನೆಗೆ ಅನುಮತಿ ನೀಡಬಹುದು. ಸರ್ಕಾರದ
ವಿವಿಧ ಇಲಾಖೆಗಳಿಂದ ನಗರಸಭೆಗೆ ಬರುವ ಶೇ.23ರಷ್ಟು ಅನುದಾನ ಬಳಕೆಗೆ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸ ಬಹುದು. ಆದರೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಾಲಿ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ನಗರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ವಿಚಾರ ಹಳ್ಳ ಹಿಡಿದಿದೆ.

ಅಕ್ರಮ ಖಾತೆಗಳಿಗೆ ನಗರಸಭೆ ಕುಖ್ಯಾತಿ! ಈಗಾಗಲೇ ನಗರಸಭೆಗೆ ಅಕ್ರಮ ಖಾತೆಗಳ ಕಪ್ಪು ಚುಕ್ಕೆ ದೊಡ್ಡ ಮಟ್ಟದಲ್ಲಿ ಅಂಟಿಕೊಂಡಿದೆ. ನಕಲಿ ಖಾತೆಗಳ ಜಾಲದಲ್ಲಿ ನಗರಸಭೆ ಕಚೇರಿ ವ್ಯವಸ್ಥಾಪಕರೇ ಜೈಲಿ ಹೋಗಿ ಬಂದಿದ್ದು ಈಗ ಇತಿಹಾಸ. ಇದಕ್ಕೂ ಮೊದಲು ನಗರಸಭಾ ಸದಸ್ಯರ ಹೆಸರಿನಲ್ಲಿ ಸಂಬಂಧಿಕರೊಬ್ಬರು ನಗರಸಭೆ ಹಣ ದುರ್ಬಳಕೆ
ಮಾಡಿಕೊಂಡು ದೆಹಲಿ ಪ್ರಯಾಣ ಮಾಡಿದ್ದ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ನಗರಸಭೆ ಕಂದಾಯ
ವಿಭಾಗಕ್ಕೆ ಸಕ್ರಮ ಇರುವ ದಾಖಲೆ ಕೊಟ್ಟರೂ ದುಡ್ಡು ಕೊಡದೇ ಅಧಿಕಾರಿಗಳು ಯಾವುದೇ ಖಾತೆ ಮಾಡುತ್ತಿಲ್ಲ ಎಂಬ ಆರೋಪವಿದೆ.

ಇತಂಹ ವೇಳೆ ನಗರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಅವಕಾಶ ಇದ್ದರೂ ಕಳೆದ ನಾಲ್ಕು ವರ್ಷಗಳಿಂದ ರಚನೆ ಮಾಡದೇ ನಗರಸಭೆ ಅಧ್ಯಕ್ಷರ ಹಾದಿಯಾಗಿ ಸದಸ್ಯರು ಕೂಡ ಈ ಬಗ್ಗೆ ತುಟಿ ಬಿಚ್ಚದೇ ಮೌನ ವಹಿಸಿರುವ ಮರ್ಮವೇನು? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದು, ಇದಕ್ಕೆ ನಗರಸಭೆ ಆಡಳಿತ ಮಂಡಳಿಯೆ ಉತ್ತರ ನೀಡ ಬೇಕಿದೆ. ಸ್ಥಾಯಿ ಸಮಿತಿ ಕುರಿತು ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಉಮಾಕಾಂತ್‌, ನಗರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಕಾನೂನಲ್ಲಿ ಅವಕಾಶವಿದೆ. ಆದರೆ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿಲ್ಲ. ಸ್ಥಾಯಿ ಸಮಿತಿ ರಚನೆ ಆಡಳಿತ ಮಂಡಳಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಅಧಿಕಾರಿಗಳ ಪಾತ್ರವಿಲ್ಲ ಎಂದರು.

ಒಟ್ಟಿನಲ್ಲಿ 4 ವರ್ಷಗಳಿಂದ ಸ್ಥಾಯಿ ಸಮಿತಿ ರಚನೆ ಮಾಡದೇ ಮೀನಮೇಷ ಎಣಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನಾದರೂ ನಗರಸಭೆ ಆಡಳಿತ ಮಂಡಳಿ ಸ್ಥಾಯಿ ಸಮಿತಿ ರಚಿಸಿ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡುವರೇ ಎಂದು ಕಾದು ನೋಡಬೇಕಿದೆ.

ಪೌರಾಡಳಿತ ನಿಯಮಗಳ ಪ್ರಕಾರ ನಗರಸಭೆಗಳಲ್ಲಿ ಕಡ್ಡಾಯವಾಗಿ ಸ್ಥಾಯಿ ಸಮಿತಿ ರಚನೆ ಮಾಡಲು ಅವಕಾಶವಿದೆ. ನಗರಸಭೆ ವ್ಯಾಪ್ತಿಯಲ್ಲಿ ಆರೋಗ್ಯ, ಸ್ವತ್ಛತೆ, ನೈರ್ಮಲ್ಯ ಉಸ್ತುವಾರಿ ನೋಡಿಕೊಳ್ಳುವ ವಿಶೇಷ ಅಧಿಕಾರವಿದೆ. ಸ್ಥಾಯಿ ಸಮಿತಿ ಅಧ್ಯಕ್ಷರು ನಗರಸಭೆ ಅಧಿಕಾರಿಗಳ ಜತೆಗೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಬಹುದು.
 ಡಾ.ಎನ್‌.ಭಾಸ್ಕರ್‌, ಯೋಜನಾ ನಿದೇರ್ಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ

ಗೌರಿಬಿದನೂರು, ಶಿಡ್ಲಘಟ್ಟದಲ್ಲೂ ಇಲ್ಲ ಜಿಲ್ಲೆಯ ಗೌರಿಬಿದನೂರು ಹಾಗೂ ಶಿಡ್ಲಘಟ್ಟ ನಗರಸಭೆಗಳಲ್ಲಿ ಕೂಡ ಹಲವು ವರ್ಷಗಳಿಂದ ಸ್ಥಾಯಿ ಸಮಿತಿ ರಚನೆಗೆ ಗ್ರಹಣ ಹಿಡಿದಿದೆ. ನಗರಸಭೆಗಳಲ್ಲಿ ಅಧ್ಯಕ್ಷರಾದವರು ಸಮಿತಿ ರಚನೆಗೆ ಒಲವು ತೋರುತ್ತಿಲ್ಲ ಎಂಬ ಆರೋಪವಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಆಕಾಂಕ್ಷಿಗಳು ಸಮಿತಿ ರಚನೆಗೆ ಒತ್ತಡ ತರುತ್ತಿದ್ದರೂ ಯಾರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.

Trending videos

Back to Top