CONNECT WITH US  

ಭಜನೆ, ಕೀರ್ತನೆಗಳಿಂದ ಮಾನಸಿಕ ನೆಮ್ಮದಿ

ಚಿಕ್ಕಬಳ್ಳಾಪುರ: ನಿತ್ಯ ದೇವರನ್ನು ಪೂಜಿಸುವುದರಿಂದ ಮನುಷ್ಯ ಏಕಾಗ್ರತೆ ಹೊಂದಿ ಭಜನೆ, ಕೀರ್ತನೆಗಳನ್ನು ಮಾಡುವುದರಿಂದ ಮಾನಸಿಕ ನೆಮ್ಮದಿ ಪಡೆಯಬಹುದು ಎಂದು ಜಿಲ್ಲೆಯ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಮ್‌ ತಿಳಿಸಿದರು.

ಜಿಲ್ಲೆಯ ಸೋಮೇನಹಳ್ಳಿ ಹೋಬಳಿ ಕಮ್ಮಡಿಕೆ ಗ್ರಾಮದ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಗ್ರಾಮ ಸಂಕೀರ್ತನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಷ್ಟಗಳು ಬಂದಾಗ ವೆಂಕಟರಮಣ ಎನ್ನದೆ ಸದಾ ಕಾಲ ದೇವರ ಸ್ಮರಣೆಯನ್ನು ಮಾಡುವವರಾಗಬೇಕು. ಪ್ರತಿ ನಿತ್ಯವು ಬಿಡುವಾದಾಗ ದೇವರನ್ನು ನೆನೆಯುವ ಮೂಲಕ ನಾವು ನೆಮ್ಮದಿಯನ್ನು ಕಾಣಬಹುದು.

ಗ್ರಾಮದಲ್ಲಿ ಶಾಂತಿ, ನೆಮ್ಮದಿ, ವರ್ಷಪೂರ್ತಿ ಮಳೆ, ಬೆಳೆಗಳು ಉತ್ತಮವಾಗಿ ರೈತಾಪಿ ಜನ ಸಮೃದ್ಧಿ ಜೀವನ ನಡೆಸಲು ಗ್ರಾಮಗಳಲ್ಲಿ ಜಾತ್ರೆ, ರಥೋತ್ಸವಗಳನ್ನು ನಡೆಸುವುದರ ಜತೆಗೆ ದಾನ, ಧರ್ಮಗಳನ್ನು ಮಾಡುವುದರಿಂದ ನಾವು ದೇವರನ್ನು ಕಾಣಬಹುದು ಎಂದು ತಿಳಿಸಿದರು.

ಪರಿಸರ ಉಳಿಸಲು ಮುಂದಾಗಿ: ಧಾರ್ಮಿಕ ಕೈಂಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನುಷ್ಯನ ಮನಸ್ಸಿಗೆ ನೆಮ್ಮದಿ, ಕಷ್ಟಗಳ ನಿವಾರಣೆ ಶಾಂತಿ-ನೆಮ್ಮದಿಯನ್ನು ಪಡೆಯಬಹುದು. ನಮ್ಮ ಪರಂಪರೆ, ಸಂಸ್ಕೃತಿಯನ್ನು ಮರೆಯುತ್ತಿರುವುದರ ಜತೆಗೆ ಮನುಷ್ಯನ ಪ್ರಕೃತಿ ಮಾತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರಿಂದ ಇಂದು ಮಳೆ, ಬೆಳೆಗಳು ಕ್ಷೀಣಿಸಿವೆ.

ಸಕಲ ಜೀವರಾಶಿಗಳಿಗೂ ಭೂಮಿ ಮೇಲೆ ಬದುಕುವ ಹಕ್ಕು ಇವೆ. ಪರಿಸರವನ್ನು ಉಳಿಸಿ, ಬೆಳೆಸುವ ದಿಕ್ಕಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು. ಗುರುನಾಮ ಸ್ಮರಣೆಯನ್ನು ಜಪಿಸುವುದರಿಂದ ಮನುಷ್ಯನಲ್ಲಿ ಸದ್ಗುಣಗಳು ಬೆಳೆಯುತ್ತವೆ. ಗ್ರಾಮ ಸಂಕೀರ್ತನೆ ಕಾರ್ಯಕ್ರಮಗಳು ಪ್ರತಿ ಗ್ರಾಮದಲ್ಲಿ ನಡೆಯಬೇಕು ಎಂದರು.

ಸಂಕೀತನಾ ಕಾರ್ಯಕ್ರಮದಲ್ಲಿ ಕಮ್ಮಡಿಕೆ, ಕಾಟೇನಹಳ್ಳಿ, ಜಂಬಿಗೇಮರದಹಳ್ಳಿ, ಸೋಮೇನಹಳ್ಳಿ, ಗುಮ್ಮರೆಡ್ಡಿಹಳ್ಳಿ, ಗುಂಡ್ಲಹಳ್ಳಿ ಮುಂತಾದ ಗ್ರಾಮಗಳ ಭಜನೆ ತಂಡಗಳವರು ಹಾಡುಗಳನ್ನು ಹಾಡುತ್ತಾ ಸಾಗಿದರು. ಪ್ರತಿಯೊಂದು ಮನೆಯವರು ಕೈವಾರ ತಾತಯ್ಯ ನವರ ಭಾವಚಿತ್ರಕ್ಕೆ ಹೂವು, ಕಾಯಿ, ಹಣ್ಣುಗಳನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಿದರು. ಮುತ್ತೈದೆಯರು ಎಂ.ಆರ್‌. ಜಯರಾಮ್‌ ಅವರ ಪಾದಗಳಿಗೆ ಪೂಜೆಯನ್ನು ಸಲ್ಲಿಸಿ ಆರತಿಯನ್ನು ಬೆಳಗಿದರು.

ಈ ಸಂಕೀರ್ತನೆ ಕಾರ್ಯಕ್ರಮದಲ್ಲಿ ಕೈವಾರ ಮಠದ ನಾದಸುಧಾರಸ ಕಾರ್ಯಕ್ರಮ ಸಂಚಾಲಕ ವಿದ್ವಾನ್‌ ಬಾಲಕೃಷ್ಣ ಭಾಗವತರು, ಕೈವಾರ ಯೋಗಿನಾರಾಯಣಸ್ವಾಮಿ ಟ್ರಸ್ಟ್‌ನ ಪದಾಧಿಕಾರಿಗಳಾದ ವಿಭಾಕರರೆಡ್ಡಿ, ಜಂಬಿಗೇಮರದಹಳ್ಳಿ ಕೆ. ನರಸಿಂಹಪ್ಪ, ಕಮ್ಮಡಿಕೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಭಕ್ತಾದಿಗಳಿಗೆ ಅನ್ನದಾಸೋಹ ನಡೆಯಿತು.


Trending videos

Back to Top