CONNECT WITH US  

ಜಿಲ್ಲಾದ್ಯಂತ ಅಜಾತಶತ್ರು ವಾಜಪೇಯಿ ನಿಧನಕ್ಕೆ ಸಂತಾಪ

ಚಿಕ್ಕಬಳ್ಳಾಪುರ: ದೇಶದಲ್ಲಿ ಮೊದಲ ಬಾರಿಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೈ ಹಾಕಿ ದೇಶದ ವಿವಿಧ ರಾಜ್ಯಗಳ ನಡುವೆ ಬಹುದೊಡ್ಡ ಪ್ರಮಾಣದಲ್ಲಿ ಸಂಪರ್ಕ ಜಾಲವನ್ನು ವಿಸ್ತರಿಸಿ ಹೆದ್ದಾರಿಗಳ ನಿರ್ಮಾಣದಲ್ಲಿ ಹೊಸ ಕ್ರಾಂತಿ ಮಾಡಿದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನಕ್ಕೆ ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ತೀವ್ರ ಕಂಬನಿ ವ್ಯಕ್ತವಾಗಿದೆ.

ಪತ್ರಕರ್ತರಾಗಿ, ಸಾಹಿತಿಯಾಗಿ, ರಾಜಕಾರಣದಲ್ಲಿ ಅಜಾತಶತ್ರುವಾಗಿ ಬೆಳೆದು ದೇಶದ ಪ್ರಧಾನಿಯಾದ ವಾಜಪೇಯಿ ನಿಧನ ಭಾರತಕ್ಕೆ ತುಂಬಲಾರದ ನಷ್ಟ ಎಂದು ಅವರ ಅಕಾಲಿಕ ನಿಧನದ ಬಗ್ಗೆ ಜಿಲ್ಲೆಯ ಜನ ತಮ್ಮ ಅಶ್ರುತರ್ಪಣೆ ವ್ಯಕ್ತಪಡಿಸುತ್ತಿದ್ದಾರೆ.

ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ: ಚಿಕಿತ್ಸೆ ಫ‌ಲಿಸದೇ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದ ಮಾಜಿ ಪ್ರಧಾನಿ ವಾಜಪೇಯಿಗೆ ಜಿಲ್ಲಾದ್ಯಂತ ಶೋಕಾಚರಣೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಆನಾರೋಗ್ಯಕ್ಕೀಡಾಗಿ ಇತ್ತೀಚೆಗೆ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ ಗುರುವಾರ ಚಿಕಿತ್ಸೆ ಫ‌ಲಿಸದೇ ನಿಧನರಾದ ಸುದ್ದಿ ಹೊರ ಬೀಳುತ್ತಿದ್ದಂತೆ ಜಿಲ್ಲೆಯ ಸಾರ್ವಜನಿಕ ಹಾಗೂ ಬಿಜೆಪಿ ಪಕ್ಷದ ವಲಯದಲ್ಲಿ ಮಾಜಿ ಪ್ರಧಾನಿಗಳ ನಿಧನಕ್ಕೆ ತೀವ್ರ ಕಂಬನಿ ವ್ಯಕ್ತವಾಯಿತು. 

ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಅಟಲ್‌ ಬಿಹಾರಿ ವಾಜಪೇಯಿ ಕೊಡುಗೆ ಅಪಾರವಾದದು. ದೇಶದ ಉದ್ದಗಲಕ್ಕೂ ಅವರ ಕಾಲವಧಿಯಲ್ಲಿ ನಿರ್ಮಿಸಲಾದ ಚತುಷ್ಪಥ ರಾಷ್ಟ್ರೀಯ ರಸ್ತೆಗಳು ಸಾಕಷ್ಟು ಗಮನ ಸೆಳೆದಿದ್ದವು. ಅದರಲೂ ವಾಜಪೇಯಿ ಕಾಲದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ  ಹೊಸದಾಗಿ ರೂಪಿಸಿ ಅನುಷ್ಠಾನಗೊಳಿಸಿದ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಜಿಲ್ಲೆಯ ಬಹುತೇಕ ರಸ್ತೆಗಳ ಅಭಿವೃದ್ಧಿಗೆ ಹೊಸ ಅಯಾಮವನ್ನು ತಂದು ಕೊಟ್ಟಿವೆ ಎಂದು ಜಿಲ್ಲೆಯ ಜನತೆ ಮಾಜಿ ಪ್ರಧಾನಿಗಳ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಲಾ, ಕಾಲೇಜುಗಳಲ್ಲಿ ಸಂತಾಪ: ದೇಶದ ಮಾಜಿ ಪ್ರಧಾನಿ ವಾಜಪೇಯಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ಉಪನ್ಯಾಸಕರು ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಅವರ ನಿಧನಕ್ಕೆ ಬಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ಇನ್ನೂ ಜಿಲ್ಲೆಯ ವಿವಿಧ ನಗರ, ಪಟ್ಟಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಅವರ ಭಾವಚಿತ್ರ ಇರುವ ಫ್ಲೆಕ್ಸ್‌,  ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದು ಸಾಮಾನ್ಯವಾಗಿತ್ತು. ಜಿಲ್ಲಾ ಕೇಂದ್ರದ ವಿವಿಧಡೆಗಳಲ್ಲಿಯು ಕೂಡ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸುವ ಫ್ಲೆಕ್ಸ್‌,  ಬ್ಯಾನರ್‌ಗಳನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಅಳವಡಿಸುತ್ತಿದ್ದರು.

ಎಬಿವಿಪಿ ವತಿಯಿಂದ ಶ್ರದ್ಧಾಂಜಲಿ: ವಾಜಪೇಯಿ ನಿಧನದ ಸುದ್ದಿ ಪ್ರಕಟಿಸುವ ಮೊದಲೇ ಚಿಕ್ಕಬಳ್ಳಾಪುರದ ಕೆವಿ ಬಿಎಡ್‌. ಕಾಲೇಜಿನಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಕಾರ್ಯಕರ್ತರು ವಾಜಪೇಯಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಎನ್‌.ಮಂಜುನಾಥರೆಡ್ಡಿ ದೇಶದ ಪ್ರಧಾನಿಯಾಗಿ ವಾಜಪೇಯಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಕೆ.ವಿ ಬಿಎಡ್‌ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.

ದೇಶದ ಎರಡನೇ ಗಾಂಧಿ: ಮಾಜಿ ಪ್ರಧಾನಿಗಳ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ, ವಾಜಪೇಯಿ ಅಪರೂಪದ ವ್ಯಕ್ತವಾಗಿದ್ದು, ದೇಶದ ಕಂಡ ಎರಡನೇ ಗಾಂಧೀಜಿ ಎಂದು ಬಣ್ಣಿಸಿದರು.

ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದದು. ಸ್ವಾರ್ಥ ರಾಜಕಾರಣ ಎಂದೂ ಮಾಡದೇ ಕೇವಲ ದೇಶದ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದರೆ ಎಂದು ತಿಳಿಸಿದರು. ವಾಜಪೇಯಿ ನಿಧನಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಅಗಲಗುರ್ಕಿ ಆರ್‌.ಚಂದ್ರಶೇಖರ್‌ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ 'ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು' ಗೋಷ್ಠಿಯಲ್ಲಿ ಡಾ| ಶಿವ ವಿಶ್ವನಾಥನ್‌ ಮಾತನಾಡಿದರು.

Jan 20, 2019 05:03pm

ಶಿರಸಿ: ಬಣ್ಣದ ಮಠದ ಶ್ರೀಗಳು ಆಶೀರ್ವಚನ ನೀಡಿದರು.

Jan 20, 2019 04:54pm

Trending videos

Back to Top