CONNECT WITH US  

ಪ್ರತಿಯೊಬ್ಬರು ಜೀವನದಲ್ಲಿ ಮೌಲ್ಯ ಅಳವಡಿಸಿಕೊಳ್ಳಿ

ಚಿಕ್ಕಬಳ್ಳಾಪುರ: ಜಗತ್ತಿನಲ್ಲಿ ಶಿಕ್ಷಣಕ್ಕಿಂತ ಆಧ್ಯಾತ್ಮ ಮತ್ತೂಂದಿಲ್ಲ. ಮಕ್ಕಳನ್ನು ಶಿಕ್ಷಕರಾದವರು ನಗಮುಖದಿಂದ ನೋಡಬೇಕಿದೆ. ಯಾವುದೇ ಜಾತಿ, ಧರ್ಮ, ಮತ ಇಲ್ಲದೇ ಎಲ್ಲರನ್ನು ಒಟ್ಟಾಗಿ ನೋಡುವ ಮಮತೆ, ಸಮತೆ ಇಂದು ಪ್ರತಿಯೊಬ್ಬರ ಜೀವನದಲ್ಲಿ ಮೌಲ್ಯಗಳಾಗಬೇಕಿದೆ ಎಂದು ಸಾಹಿತಿ ಜಯಂತ್‌ ಕಾಯ್ಕಿಣಿ ತಿಳಿಸಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಪ್ರೇಮಾಮೃತ ಸಭಾಂಗಣದಲ್ಲಿ ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ನಡೆದ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿ, ಸ್ವಂತ ಬುದ್ಧಿಯಿಂದ ಜಗತ್ತು ನೋಡುವ ಕೆಲಸ ಆಗಬೇಕಿದೆ.

ಶಿಷ್ಯ ವೃಂದ ಜೀವನದ ಉದ್ದಕ್ಕೂ ಶಿಕ್ಷಕರನ್ನು ನೆನೆಪಿನಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಬದುಕು ಪ್ರೀತಿಸುವುದನ್ನು ಕಲಿಸಬೇಕಿದೆ. ಕೇವಲ ಪಠ್ಯ ಬೋಧನೆಗೆ ಸಿಮೀತಗೊಳ್ಳದೇ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವಂತಹ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿರುಚಿ ಮೂಡಿಸುವ ಕೆಲಸವನ್ನು ಶಿಕ್ಷಕರು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.

ಸ್ವಂತ ಬುದ್ಧಿಶಕ್ತಿ ಬಳಸಿ: ಇಂದು ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವತಂತ್ರ್ಯಕ್ಕೆ ಬಲ ತಂದುಕೊಟ್ಟಿವೆ. ಅದರಲ್ಲೂ ಮುಖ್ಯವಾಗಿ ಮಾತನಾಡಲೇ ಬಾರೆದೆಂಬ ಸ್ಥಿತಿಯಲ್ಲಿದ್ದ ಮಹಿಳೆಯರಿಗೂ ಜಾಲತಾಣಗಳು ದೊಡ್ಡ ದ್ವನಿಯಾಗಿವೆ. ನಾವು ಜಾಲತಾಣಗಳ ದಾಸರಾಗದೇ ಸ್ವಂತ ಬುದ್ಧಿಶಕ್ತಿಯನ್ನು ಬಳಸಬೇಕು. ಫೇಸ್‌ಬುಕ್‌, ವಾಟ್ಸ್‌ಆಫ್ಗಳಲ್ಲಿ ಬರುವ ಸಂದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಮಾಜಕ್ಕೆ ಉಪಯುಕ್ತವಾಗಿದ್ದರೆ ಮಾತ್ರ ಇನ್ನೊಬ್ಬರಿಗೆ ಕಳುಹಿಸಿ,

ಅನವಶ್ಯಕವಾದ ಸಂದೇಶಗಳನ್ನು ಕಳುಹಿಸಿ ಅವಾಂತರ ಸೃಷ್ಠಿಗೆ ಕಾರಣರಾಗಬೇಡಿ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮನುಷ್ಯನಿಗೆ ತನ್ನಲ್ಲಿ ತನಗೆ ಆಸಕ್ತಿ ಕಡಿಮೆಯಾಗುತ್ತಿದೆ. ಸಮಾಜದ ಮೇಲೆ ಆಸಕ್ತಿ ಕಡಿಮೆ ಆಗುತ್ತಿದೆ. ಎಲ್ಲೋ ಒಂದು ಕಡೆ ಯುವ ಪೀಳಿಗೆ ಜಾಲತಾಣಗಳ ಮನೋದಾಸ್ಯಕ್ಕೆ ಒಳಗಾಗುವ ಮೂಲಕ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರಳ ಬದುಕಿನಿಂದ ಆತ್ಮ ತೃಪ್ತಿ: ಜೀವನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸರಳವಾಗಿ ಬದುಕು ನಡೆಸುವುದರಿಂದ ಸಿಗುವ ಆತ್ಮ ತೃಪ್ತಿ, ಸಂತೋಷ, ಆನಂದ ಯಾವುದರಲ್ಲಿಯು ಸಿಗುವುದಿಲ್ಲ. ಭಾರತದ‌ ಜನ ಸರಳವಾಗಿ ಬದುಕುತ್ತಾರೆಂಬ ಕಾರಣಕ್ಕೆ ವಿದೇಶಿಗರು ನಮ್ಮ ದೇಶಿಯ ಜೀವನ ಶೈಲಿಯನ್ನು ಇಷ್ಟಪಡುತ್ತಾರೆ. ಸರಳ ಜೀವನ ಶೈಲಿಯಲ್ಲಿ ಸಿಗುವ ಅನುಮಪ ಶಕ್ತಿ ಮತ್ತೂಂದರಲ್ಲಿ ಸಿಗುವುದಿಲ್ಲ. ವಿಪರ್ಯಾಸ ಇವತ್ತು ಯಾವುದೇ ಕಾಲದಲ್ಲಿಯು ಕೆಟ್ಟ ರಾಜಕಾರಣ, ಜಾತಿ, ಧರ್ಮ, ಮತ ಬೇಧ ಸಮಾಜವನ್ನು ಹಾಳು ಮಾಡುತ್ತಿದೆ.

ನಮ್ಮನ್ನು ನಾವು ಜೀವನದಲ್ಲಿ ತೊಳೆದುಕೊಳ್ಳದಿದ್ದರೆ ಬದುಕಿನಲ್ಲಿ ಉನ್ನತ್ತೀಕರಣಗೊಳ್ಳುವುದು ಅಸಾಧ್ಯ. ಉನ್ನತ್ತೀಕರಣಗೊಳ್ಳಬೇಕಾದರೆ ಮನುಷ್ಯನಲ್ಲಿ ನೈತಿಕ ಹಾಗೂ ಸಾಂಸ್ಕೃತಿಕ ಅಭಿರುಚಿ ಅಗತ್ಯ. ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು. ಪುಸ್ತಕಗಳನ್ನು ನಿರಂತರವಗಿ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ವೈಚಾರಿಕವಾಗಿ ಜನರನ್ನು ಪ್ರೀತಿಸುವ ಕೆಲಸ ಸಮಾಜದಲ್ಲಿ ಅಗಬೇಕು. ಈ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳಲ್ಲಿ ಸಮತೆ, ಮಮತೆ ಬೆಳೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಹೆಚ್‌.ವಿ.ಮಂಜುನಾಥ, ಸಿಇಒ ಗುರುದತ್‌ ಹೆಗ್ಗಡೆ, ಜಿಪಂ ಸದಸ್ಯರಾದ ಕೆ.ವಿ.ಮುನೇಗೌಡ, ಕೆ.ಸಿ.ರಾಜಾಕಾಂತ್‌, ಪಿ.ಎನ್‌.ಪ್ರಕಾಶ್‌, ಶಿಕ್ಷಣ ತಜ್ಞರಾದ ಡಾ.ಕೋಡಿರಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್‌.ಶಿವಣ್ಣರೆಡ್ಡಿ ಉಪಸ್ಥಿತರಿದ್ದರು.

Trending videos

Back to Top