ಅರಣ್ಯರೋದನವಾದ ವಿವೇಕಾನಂದರ ಚಿಂತನೆ

ಎನ್.ಆರ್.ಪುರ: ಸ್ವಾಮಿ ವಿವೇಕಾನಂದ ಚಿಂತನೆಗಳು ಇಂದಿನ ಸಮಾಜಕ್ಕೆ ಬೆಳಕಾಗಲಿ ಎಂದು ಸ.ಪ್ರ.ದ. ಕಾಲೇಜಿನ ಕನ್ನಡ ಉಪನ್ಯಾಸಕ ಡಾ|ಅಣ್ಣಪ್ಪ ಎನ್. ಮಳೀಮs… ತಿಳಿಸಿದರು.
ಅವರು ಮೆಣಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕವಾಗಿ ಮುಂದುವರಿಯಲು ಅವರ ಚಿಂತನೆಗಳು ಅಗತ್ಯವಾಗಿವೆ. ಸ್ವಾಮಿ ವಿವೇಕಾನಂದರ ವಿಚಾರಗಳು ಪ್ರಸ್ತುತ ಸಮಾಜದಲ್ಲಿ ಅರಣ್ಯರೋಧನವಾಗಿ ಕಾಣುವಂತೆ ಭಾಸವಾಗುತ್ತಿದೆ ಎಂದರು.
ಪ್ರಾಧ್ಯಾಪಕರಾದ ಪೊ| ಚಂದ್ರಶೇಖರ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಪ್ರತೀಕ. ಇಡೀ ವಿಶ್ವಕ್ಕೆ ಆಧ್ಯಾತ್ಮಿಕತೆಯನ್ನು ಸಾರಿದರು. ನಮ್ಮ ದೇಶದ ಅಗತ್ಯತೆಗಳ ಬಗ್ಗೆ ಮನಗಂಡು ಸಾತ್ವಿಕ ಹೋರಾಟ ಮಾಡಿದರು ಎಂದು ಹೇಳಿದರು. ಡಾ| ಕೆ.ಉಮೇಶ ಮಾತನಾಡಿ, ವಿದ್ಯಾರ್ಥಿಗಳು ಭೌದ್ಧಿಕ ದಾರಿದ್ರವನ್ನು ನೀಗಿಸಿಕೊಳ್ಳಲು ಸ್ವಾಮಿ ವಿವೇಕಾನಂದರ ಚಿಂತನೆಗಳು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಪೊ| ಕೆ.ಪೂರ್ಣೇಶ್ ಮಾತನಾಡಿ, ಜೀವನದಲ್ಲಿ ಬದಲಾವಣೆ ಪಡೆಯಬೇಕೆಂದರೆ ಒಳ್ಳೆಯ ಕಾರ್ಯದಲ್ಲಿ ಭಾಗಿಯಾಗಬೇಕು. ವಿವಿಧ ರೀತಿಯ ಚಟುವಟಿಕೆಯಲ್ಲಿ ಭಾಗಿಯಾದರೆ ಹೆಚ್ಚು ಕಲಿಯಲು ಸಾಧ್ಯ. ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಸೂಕ್ತವಾದ ಸಂದರ್ಭದಲ್ಲಿ ವೇದಿಕೆಗಳನ್ನು ಉಪಯೋಗಿಸಿಕೊಳ್ಳಬೇಕು. ವಿವೇಕಾನಂದರು ಯುವಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದು, ಅವರ ಕನಸು ಸಾಕಾರಗೊಳ್ಳಬೇಕಾದರೆ ತಮ್ಮ ಪಾತ್ರ ದೊಡ್ಡದು ಎಂದು ಹೇಳಿದರು. ಪ್ರೊ|ಸೈಯದ್ ನಿಜಾಮುದ್ದೀನ್, ಪ್ರೊ|ಲಕ್ಷ್ಮಣ ನಾಯ್ಕ, ವಿದ್ಯಾರ್ಥಿನಿಯರಾದ ಪ್ರಣಮ್ಯ ಜೈನ್, ಕಾವ್ಯ, ಪ್ರೀತಿಕಾ ಮತ್ತಿತರರಿದ್ದರು.