CONNECT WITH US  

ಡಿಸಿಸಿ ಬ್ಯಾಂಕ್‌ನಿಂದಲೂ ನಗದುರಹಿತ ವ್ಯವಹಾರ

ಶೃಂಗೇರಿ: ಕೇಂದ್ರ ಸರಕಾರದ ಡಿಜಿಟಲ್‌ ಇಂಡಿಯಾದ ಕಾರ್ಯಕ್ರಮದಂತೆ ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡಲು ಡಿಸಿಸಿ ಬ್ಯಾಂಕ್‌ ಕೈಜೊಡಿಸಿದೆ. ಇದರ ಅಂಗವಾಗಿ ರೈತರಿಗೆ ರುಪೇ ಕಾರ್ಡ್‌ ನೀಡುತ್ತಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಕೆ.ದಿನೇಶ್‌ ಹೆಗ್ಡೆ ಹೇಳಿದರು.

ಅವರು ಸೋಮವಾರ ಪಟ್ಟಣದ ಶ್ರೀ ಶಾರದಾ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಸಭಾಂಗಣದಲ್ಲಿ ಆಯೋಜಿಸಿದ್ದ ರುಪೇ (ಎಟಿಎಂ) ಕಾರ್ಡ್‌ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ರಾಜ್ಯ ಸರಕಾರ ಸಾಲ ಮನ್ನಾ ಯೋಜನೆಯಡಿ ತಾಲೂಕಿನ 2118 ರೈತರಿಗೆ 9.75 ಕೋಟಿ ರೂ.ಗಳ ಸಾಲ ಮನ್ನಾ ಆಗಿದೆ. ಐವತ್ತು ಸಾವಿರದೊಳಗಿನ ಸಣ್ಣ ಮತ್ತು ಅತಿ ಸಣ್ಣ ರೈತರ ಸಾಲ ಸಂಪೂರ್ಣ ಮನ್ನಾ ಆಗಿದೆ ಎಂದರು. ಶೇರುದಾರ ಹಿತ ಕಾಪಾಡುವಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಶೇರುದಾರರು ಬ್ಯಾಂಕಿಂಗ್‌ ವ್ಯವಹಾರವನ್ನು ಸಹಕಾರಿ ಸಂಸ್ಥೆಗಳ ಮೂಲಕ ಮಾಡಬೇಕು. ವಾಣಿಜ್ಯ ಬ್ಯಾಂಕುಗಳಲ್ಲಿರುವ ಬಹುತೇಕ ಎಲ್ಲಾ ವ್ಯವಸ್ಥೆಗಳು ಈಗ ಡಿಸಿಸಿ ಬ್ಯಾಂಕ್‌ನಲ್ಲಿಯೂ ಲಭ್ಯವಿದೆ. ಸಹಕಾರ ಸಂಸ್ಥೆಗಳು ಸದೃಢವಾಗುತ್ತಿದ್ದು,ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಪೀಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎ.ಎಸ್‌.ನಯನ ಮಾತನಾಡಿ, ಸಾಲ ಮನ್ನಾ ಮಾಡುವಾಗ ಸರಕಾರಗಳು ಪ್ರಾಮಾಣಿಕವಾಗಿ ಸಾಲ ಮರು ಪಾವತಿಸುವ ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು.ಅವೈಜ್ಞಾನಿಕ ಸಾಲ ಮನ್ನಾ ಪದ್ದತಿಯಿಂದ ರೈತರು ಸಕಾಲಿಕವಾಗಿ ಸಾಲ ಮರು ಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ರುಪೇ ಕಾರ್ಡ್‌ ಮೂಲಕ ನಗದು ಪಡೆಯಲು ಬ್ಯಾಂಕಿನ ಸಮಯವನ್ನು ಕಾಯಬೇಕಾಗಿಲ್ಲ.ಯಾವುದೇ ಎಟಿಎಂ ಮೂಲಕವೂ ಹಣವನ್ನು ಪಡೆಯುವ ಅವಕಾಶವಿದೆ. ರೈತರು ಇದರ 
ಸದುಪಯೋಗ ಪಡೆಯಬೇಕು ಎಂದರು.

ಶಾರದಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೇತನ್‌ ಹೆಗ್ಡೆ ಮಾತನಾಡಿ, ಸಹಕಾರಿ ವ್ಯವಸ್ಥೆಯಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಿದೆ. ಸಹಕಾರಿ ವ್ಯವಸ್ಥೆಯಲ್ಲಿ ಪಡಿತರ ನೀಡುವಲ್ಲಿ ಅತಿ ಕಡಿಮೆ ಲಾಭವಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಸೇವೆ ನೀಡಲಾಗುತ್ತಿದೆ ಎಂದರು. ಹಾಲಂದೂರು ಪಿಎಸಿಎಸ್‌ ಅಧ್ಯಕ್ಷ ಮೇಗಳಬೈಲು ಚಂದ್ರಶೇಖರ್‌ ಮಾತನಾಡಿ, ಸಹಕಾರ ಸಂಸ್ಥೆಯಲ್ಲಿ ದೊರಕುತ್ತಿರುವ ಸಾಲವನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ರೈತರು ಬಳಸಿಕೊಂಡಿಲ್ಲ. ಶೂನ್ಯ ಬಡ್ಡಿ ದರದ ಸಾಲವನ್ನು ಎಲ್ಲಾ ರೈತರು ಬಳಸಿಕೊಳ್ಳಬೇಕು ಎಂದರು.  ವಿವಿಧ ಸಹಕಾರ ಬ್ಯಾಂಕುಗಳ ಶೇರುದಾರರಿಗೆ ರುಪೇ ಕಾರ್ಡ್‌ ವಿತರಿಸಲಾಯಿತು. ಮ್ಯಾಮೊಸ್‌ ನಿರ್ದೇಶಕ ಸುರೇಶ್ಚಂದ್ರ, ಬೇಗಾರ್‌ ಪಿಎಸಿಎಸ್‌ ಅಧ್ಯಕ್ಷ ಡಿ.ಸಿ.ಶಂಕರಪ್ಪ, ಕಾವಡಿ ಅಧ್ಯಕ್ಷ ಕೆ.ನಾಗೇಂದ್ರ ಇದ್ದರು.

Trending videos

Back to Top