CONNECT WITH US  

ಹಾಲು ಖರೀದಿ ದರ ಕಡಿತಕ್ಕೆ ಶಿಮುಲ್‌ ಸಿದ್ಧತೆ

ಶಿವಮೊಗ್ಗ: ಉತ್ಪಾದಕರಿಂದ ಖರೀದಿಸುವ ದರದಲ್ಲಿ 1ರಿಂದ 2 ರೂ. ಕಡಿತಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್‌) ಮುಂದಾಗಿದ್ದು ಅದಕ್ಕಾಗಿ ಅಗತ್ಯ ಸಿದ್ಧತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಮೂರ್‍ನಾಲ್ಕು ದಿನಗಳಲ್ಲಿ ಇದು ಜಾರಿಗೆ ಬರಲಿದೆ.

ಮುಂದೆ ಎದುರಾಗಲಿರುವ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಶಿಮುಲ್‌ ಈ ಕ್ರಮಕ್ಕೆ ಮುಂದಾಗಿದ್ದು, ಹಾಲು ಉತ್ಪಾದಕರು ಇದನ್ನು ವಿರೋಧಿಸುವ ಸಾಧ್ಯತೆಯೂ ದಟ್ಟವಾಗಿದೆ. ಹಾಲು ಖರೀದಿ ಹಾಗೂ ಮಾರಾಟದ ನಡುವೆ ಕಡಿಮೆ ಅಂತರ ಕಾಯ್ದುಕೊಳ್ಳುವ ಮೂಲಕ ದೈನಂದಿನ ಚಟುವಟಿಕೆ ಹಾಗೂ ವಹಿವಾಟು ನಡೆಸುತ್ತಿರುವ ಒಕ್ಕೂಟ ಈಗಿನ ದರದಲ್ಲಿಯೇ ಖರೀದಿ ಮುಂದುವರಿಸಿದರೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಖರೀದಿ ದರ ಕಡಿತ ಮಾಡದೆ ಬೇರೆ ದಾರಿ ಇಲ್ಲ
ಎಂಬುದು ಒಕ್ಕೂಟ ಅಭಿಪ್ರಾಯವಾಗಿದೆ. 

ಸೆಪ್ಟಂಬರ್‌ನಲ್ಲಿ ಬಿದ್ದಿರುವ ಉತ್ತಮ ಮಳೆ, ಕುಸಿದ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆ, ದೇಹದಲ್ಲಿನ ಉಷ್ಣಾಂಶ ಇಳಿಕೆಯಿಂದ ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಹೆಚ್ಚಳಗೊಳ್ಳಲಿರುವ ಪರಿಣಾಮ ಶಿಮುಲ್‌ ಆಡಳಿತ ಮಂಡಳಿ ಖರೀದಿ ದರ ಕಡಿತದ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ತಂಪು ವಾತಾವರಣದ ಈ ಸಂದರ್ಭದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳದಿಂದ ಒಕ್ಕೂಟಕ್ಕಾಗುವ ಆರ್ಥಿಕ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಈಗಾಗಲೇ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟ, ಮಂಡ್ಯ ಹಾಲು ಒಕ್ಕೂಟ, ಹಾಸನ ಹಾಲು ಒಕ್ಕೂಟ ಸೇರಿದಂತೆ ರಾಜ್ಯದ ನಾನಾ ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಕಡಿತ ಮಾಡಿವೆ. ಇದೀಗ ಶಿವಮೊಗ್ಗ ಹಾಲು ಒಕ್ಕೂಟವೂ ಇದೇ ಹಾದಿ ಅನುಸರಿಸಲು ಮುಂದಾಗಿದೆ.

ಹಾಲು ಸಂಗ್ರಹ ಚಿತ್ರಣ: ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಒಕ್ಕೂಟದಲ್ಲಿ ಒಟ್ಟು 1118 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದ್ದು ದೊಡ್ಡ ಪ್ರಮಾಣದಲ್ಲಿ ಸದಸ್ಯರಿದ್ದಾರೆ. ಹಾಗಾಗಿ ಪ್ರಸ್ತುತ ಇಷ್ಟೊಂದು ದೊಡ್ಡ ಪ್ರಮಾಣದ ಸೊಸೈಟಿಗಳಿಂದ ಹೆಚ್ಚಿನ ಹಾಲು ಸಂಗ್ರಹವಾಗುತ್ತಿದೆ. 

ಮಳೆ ಉತ್ತಮವಾಗಿ ಬಿದ್ದು ಗ್ರಾಮೀಣ ಪ್ರದೇಶದಲ್ಲಿ ಸಮೃದ್ಧ ಮೇವು ಲಭಿಸುತ್ತಿರುವ ಹಿನ್ನೆಲೆಯಲ್ಲಿ ಹಾಲು ಉತ್ಪಾದನೆ ಸಹಜವಾಗಿಯೇ ಹೆಚ್ಚಾಗಿದೆ. ಪ್ರಸ್ತುತ ಶಿಮುಲ್‌ಗೆ ದಿನವೊಂದಕ್ಕೆ 5.84 ಲಕ್ಷ ಲೀಟರ್‌ ಬರುತ್ತಿದೆ. ಒಕ್ಕೂಟದ ಸರಾಸರಿ ಹಾಲು ಸಂಗ್ರಹ 5.71 ಲಕ್ಷ ಲೀಟರ್‌ ಇದ್ದು ಮುಂದಿನ ದಿನಗಳಲ್ಲಿ 6 ರಿಂದ 7 ಸಾವಿರ ಹೆಚ್ಚುವರಿ ಹಾಲು ಉತ್ಪಾದನೆಯನ್ನು ಒಕ್ಕೂಟ ನಿರೀಕ್ಷಿಸುತ್ತಿದೆ. 

ಇಂತಹ ಸಂದರ್ಭದಲ್ಲಿ ಹಾಲು ಉತ್ಪಾದನಾ ಪ್ರಮಾಣ ಹೆಚ್ಚಳಗೊಂಡಿರುವುದರಿಂದ ರೈತರು ಹಾಗೂ ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು 1 ರಿಂದ 2 ರೂ. ಕಡಿತ ಮಾಡುವ ಉದ್ದೇಶ ಹೊಂದಿದೆ. ಈ ಮೂಲಕ ಹಾಲು ಸಂಗ್ರಹ ಪ್ರಮಾಣಕ್ಕೆ ಕಡಿವಾಣ ಹಾಕುವುದು ಒಕ್ಕೂಟದ ಗುರಿಯಾಗಿದೆ.

ಈ ಹಿಂದಿನ ಕಡಿತ: ಕಳೆದ 2 ರಿಂದ 3 ವರ್ಷದ ಹಿಂದೆ ಖರೀದಿ ದರ ಕಡಿತ ಸಂಬಂಧ ಒಕ್ಕೂಟವು ಪ್ರಮುಖ ನಿರ್ಧಾರ ಕೈಗೊಂಡಿತ್ತು. ಹಿಂದಿನ ನಾಲ್ಕು ವರ್ಷದಿಂದ ಜಿಲ್ಲೆಯು ಮಳೆ ಕೊರತೆ ಹಾಗೂ ಬರ ಎದುರಿಸಿದ್ದು ಈ ವರ್ಷ ಸ್ವಲ್ಪಮಟ್ಟಿಗೆ ಪರಿಸ್ಥಿತಿ ಸುಧಾರಿಸಿದೆ. ಬೆನ್ನಲ್ಲೇ ಹಾಲು ಉತ್ಪಾದನೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಹಾಗಾಗಿ ಖರೀದಿ ದರ ಕಡಿತ ಮಾಡದೆ ಬೇರೆ ದಾರಿಯೇ ಇಲ್ಲ ಎಂದು ಒಕ್ಕೂಟದ ಮೂಲಗಳು ತಿಳಿಸುತ್ತವೆ. ಪ್ರಸ್ತುತ ಒಕ್ಕೂಟವು ಸೊಸೈಟಿ ಸದಸ್ಯರಾದ ರೈತರು ಹಾಗೂ ಹಾಲು ಉತ್ಪಾದಕರಿಂದ ಪ್ರತಿ ಲೀ. ಹಾಲನ್ನು 25.60 ರೂ. ದರದಲ್ಲಿ ಖರೀದಿಸುತ್ತಿದೆ.

ಅ.9 ರಂದು ನಿರ್ಧಾರ: ಅ.9 ರಂದು ಕರೆಯಲಾಗಿರುವ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಮುಲ್‌ ಮೂಲಗಳು ತಿಳಿಸಿವೆ.

ಗೋಪಾಲ್‌ ಯಡಗೆರೆ


Trending videos

Back to Top