CONNECT WITH US  

ನೀರಾವರಿ ಯೋಜನೆ ಜಾರಿಗೆ ಆದ್ಯತೆ

ಕಡೂರು: ತಾಲೂಕಿನ ಐತಿಹಾಸಿಕ ಅಯ್ಯನಕೆರೆ, ಮದಗದಕೆರೆಗೆ ಶಾಶ್ವತ ನೀರಾವರಿಗೆ ಮತ್ತು ಕರಗಡ ಯೋಜನೆಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಜೊತೆ ಚರ್ಚಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಹೇಳಿದರು.

ಸಖರಾಯಪಟ್ಟಣದ ಅಯ್ಯನಕೆರೆ ದಂಡೆಯಲ್ಲಿರುವ ಬಲ್ಲಾಳೇಶ್ವರ ದೇವಾಲಯದ ಸೋಮವಾರದ ವಿಶೇಷ ಪೂಜೆಯಲಿ ಪಾಲ್ಗೊಂಡು ಸಮಿತಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರೈತರ ಜೀವನಾಡಿಯಾದ ಅಯ್ಯನಕೆರೆ ಮತ್ತು ಮದಗದಕೆರೆ ರೈತರಿಗೆ ಎಲ್ಲವನ್ನು ಕೊಟ್ಟಿದೆ. ಆದರೆ ಬದಲಾಗಿ ನಾವು ಕೊಟ್ಟದ್ದಾರೂ ಏನು? ಪ್ರಕೃತಿ ವಿಕೋಪದಿಂದ ಮೂರ್‍ನಾಲ್ಕು ವರ್ಷದಿಂದ ಕೆರೆ ತುಂಬದೆ ನೀರಿನ ಸಮಸ್ಯೆಯಾಗಿ ಎಲ್ಲರಿಗೂ ಪಾಠವಾಗಿದೆ. ಇನ್ನಾದರೂ ನೀರನ್ನು ಮಿತವಾಗಿ ಬಳಸಿಕೊಳ್ಳೋಣ ಎಂದರು. 

ಹೆಬ್ಬೆ ಮತ್ತು ಭದ್ರಾ ಯೋಜನೆಯಿಂದ ಕೆರೆಗಳನ್ನು ತುಂಬಿಸಲು ಶಾಶ್ವತ ಯೋಜನೆಯನ್ನು ಮುಖ್ಯಮಂತ್ರಿಗಳ
ಜೊತೆ ಚರ್ಚಿಸಿ ಯೋಜನೆ ಮಾಡಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

ಅದೃಷ್ಟವೆಂಬಂತೆ ನಾನು ಮತ್ತು ನನ್ನ ಅಣ್ಣ ಧರ್ಮೆಗೌಡರು ಶಾಸಕರಾಗಿದ್ದೇವೆ. ಈ ಯೋಜನೆ ಮಾಡೇ ಮಾಡುತ್ತೇವೆ.
ಪ್ರತೀ ವರ್ಷ ನಡೆಯುವ ಪೂಜೆಗೆ ಸರಿಯಾದ ನಿಗದಿತ ದಿನಾಂಕವನ್ನು ಎಲ್ಲರೂ ಸೇರಿ ಒಮ್ಮತದಲ್ಲಿ ನಿಶ್ಚಯಿಸುವುದು
ಒಳಿತು ಎಂದರು.

ಬಲ್ಲಾಳೇಶ್ವರ ಸೇವಾ ಸಮಿತಿ ಅಧ್ಯಕ್ಷ ಕಲ್ಮರುಡಪ್ಪ ಮಾತನಾಡಿ, ಈ ಭಾಗದ ರೈತರ ಜೀವನಾಡಿಯಾದ ಅಯ್ಯನಕೆರೆ ಈ ವರ್ಷ ತುಂಬುತ್ತದೆ ಎಂಬ ಆಶಾಭಾವನೆ ಇದೆ. ಪ್ರತಿ ವರ್ಷ ನಡೆಯುವಂತೆ ಈ ಬಾರಿಯೂ ಅದ್ಧೂರಿಯಾಗಿ ಪೂಜೆ ಮಾಡಿದ್ದೇವೆ. ಸಹಕರಿಸಿದ ಎಲ್ಲರಿಗೂ ವಂದಿಸಿ ನೂತನ ಶಾಸಕರಾಗಿರುವ ಅಣ್ಣತಮ್ಮಂದಿರು ಹುಟ್ಟಿದ ಊರಿಗೆ ಇಂತಹ ಯೋಜನೆಯನ್ನು ಮಾಡಿ ಅಯ್ಯನಕೆರೆಗೆ ಶಾಶ್ವತ ನೀರಾವರಿಯನ್ನು ಮಾಡಲಿ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಸಮಿತಿಯ ಸದಸ್ಯರು ಗ್ರಾಮಸ್ಥರು, ಅಚ್ಚುಕಟ್ಟುದಾರರು
ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.

Trending videos

Back to Top