CONNECT WITH US  

ಪೆಟ್ರೋಲ್‌ ಬಂಕ್‌ ವಿರುದ್ಧ ಆಕ್ರೋಶ

ಚಿಕ್ಕಮಗಳೂರು: ಗ್ರಾಹಕರಿಗೆ ನಿಗದಿತಕ್ಕಿಂತ ಕಡಿಮೆ ಇಂಧನ ಹಾಕಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ಪೆಟ್ರೋಲ್‌ ಬಂಕ್‌ನ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿದ ಘಟನೆ ಗುರುವಾರ ನಗರದಲ್ಲಿ ನಡೆಯಿತು.

ಬೈಕಿನಲ್ಲಿ ಬರುತ್ತಿದ್ದ ರಾಮನಹಳ್ಳಿಯ ಶಿವರಾಜ್‌ ನಗರದ ಹೃದಯ ಭಾಗದಲ್ಲಿ ಇಂಧನ ಖಾಲಿಯಾಗಿದ್ದರಿಂದ ವಾಹನ ದೂಡಿಕೊಂಡು ಬಸ್‌ ನಿಲ್ದಾಣದ ಮುಂಭಾಗದ ಪೆಟ್ರೋಲ್‌ಬಂಕ್‌ಗೆ ಬಂದು 100 ರೂ. ಪೆಟ್ರೋಲ್‌ ಹಾಕುವಂತೆ ತಿಳಿಸಿದರು. ಬೈಕಿನಲ್ಲಿ ಕಡಿಮೆ ಪೆಟ್ರೋಲ್‌ ಇರುವುದನ್ನು ಗಮನಿಸಿ, ಈ ಕುರಿತು ಕೇಳಿದಾಗ ನೀವು ನೀಡಿದ ಹಣಕ್ಕೆ ಸರಿಯಾಗಿ ಇಂಧನ ಹಾಕಿರುವುದಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕ ಉತ್ತರಿಸಿದ್ದಾನೆ. ಏರಿದ ಧ್ವನಿಯಲ್ಲಿ ಇಬ್ಬರು ಮಾತನಾಡುತ್ತಿದ್ದಾಗ ಸಾರ್ವಜನಿಕರು ಅಲ್ಲಿ ಸೇರಿಕೊಂಡರು. ಈ ಪೆಟ್ರೋಲ್‌ ಬಂಕ್‌ನಲ್ಲಿ ಸರಿಯಾಗಿ ಪೆಟ್ರೋಲ್‌ ಹಾಕುತ್ತಿಲ್ಲ ಎಂದು ದೂರಿದರು.

ಕೆಲವು ದಿನಗಳ ಹಿಂದೆ ವಾಹನಕ್ಕೆ ಇಲ್ಲಿಯೇ ಇಂಧನ ತುಂಬಿಸಿದ್ದು, ಕಡಿಮೆ ಬಂದಿದೆ ಎಂದು ಆರೋಪಿಸಿದ ಅಲ್ಲಿದ್ದವರು ಪೆಟ್ರೋಲ್‌ ಬಂಕ್‌ನ ಪರವಾನಗಿಯನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಲ್ಲಿದ್ದವರನ್ನು ಸಮಾಧಾನ ಪಡಿಸಿ ಪೆಟ್ರೋಲ್‌ ಹಾಕಿದ್ದ ಯುವಕನನ್ನು ವಶಕ್ಕೆ ಪಡೆದುಕೊಂಡರು. ನಂತರ 100 ರೂ. ಪೆಟ್ರೋಲನ್ನು ಬಾಟಲಿಗೆ ಹಾಕಿಸಿದಾಗ ಆಗಲೂ ಕಡಿಮೆ ಪ್ರಮಾಣದ ಪೆಟ್ರೋಲ್‌ ಬಂದಿತು. ವಿಷಯ ತಿಳಿಯುತ್ತಿದ್ದಂತೆ ಅಲ್ಲಿಗೆ ಧಾವಿಸಿದ ಆಹಾರ ಇಲಾಖೆಯ ಉಪನಿರ್ದೇಶಕ ಮಹೇಶ್ವರಪ್ಪ, ಪರಿಶೀಲಿಸಿದರು. ತೂಕ ಮತ್ತು ಅಳತೆಯ ಅಧಿಕಾರಿಗಳು, ಪೆಟ್ರೋಲ್‌ ಕಂಪನಿಯ ಮುಖ್ಯಸ್ಥರು ಬಂದ ನಂತರ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಬಂಕ್‌ ಮಾಲೀಕ ಶಾಹಿಬ್‌ ಅಲಿ ಸುದ್ದಿಗಾರರೊಂದಿಗೆ ಮಾತನಾಡಿ, 45 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದು,
ತಾವು ಮತ್ತೂಂದು ಬಂಕ್‌ ಹೊಂದಿರುವುದಾಗಿ ಹೇಳಿದರು. ಅಳತೆ ಸರಿಯಾಗಿದೆ. ಆದರೆ ಕೆಲಸ ನಿರ್ವಹಿಸುವ ಹುಡುಗ
ತಪ್ಪು ಮಾಡಿರಬಹುದು ಎಂದು ತಿಳಿಸಿದರು. ಮ್ಯಾನೇಜರ್‌ ಕೃಷ್ಣೇಗೌಡ ಪೆಟ್ರೋಲ್‌ ಹಾಕುವ ಯಂತ್ರ ಸರಿಯಾಗಿದೆ.
ಹುಡುಗ ತಪ್ಪು ಮಾಡಿರುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಹೇಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ತಾವು ಹಾಗೂ ಇಲಾಖೆ ವಿಭಾಗೀಯ ನಿಯಂತ್ರಕರು ಸಂಬಂಧಿಸಿದ ಪೆಟ್ರೋಲ್‌ ಬಂಕ್‌ಗೆ ತೆರಳಿ ಪರಿಶೀಲನೆ ನಡೆಸುತ್ತೇವೆ. ಬಂಕ್‌
ನ ಅಳತೆಯಲ್ಲಿ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಪರಿಶೀಲನೆ ನಡೆಸುವವರೆಗೆ ಪೆಟ್ರೋಲ್‌ ಬಂಕ್‌ನಲ್ಲಿ ವ್ಯವಹಾರ ಸ್ಥಗಿತಗೊಳಿಸುವಂತೆ ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ಸೂಚಿಸಲಾಗಿದೆ. ಪರಿಶೀಲನೆ ನಡೆಸಿ ವರದಿ ಬಂದ ನಂತರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸುವುದಾಗಿ ತಿಳಿಸಿದರು.


Trending videos

Back to Top