CONNECT WITH US  

ತಾಲೂಕಿಗೆ ವಿಶೇಷ ಪ್ಯಾಕೇಜ್‌ ಕೊಡಿಸಿ

ಮೂಡಿಗೆರೆ: ಮೂರು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 332 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಅತೀವೃಷ್ಟಿಯಿಂದ ಹಾನಿಯಾದ ಮೂಡಿಗೆರೆ ತಾಲೂಕಿಗೆ ಪ್ಯಾಕೇಜ್‌ ಕೊಡಿಸಲು ಯತ್ನಿಸಿ ಎಂದು ತಾಪಂ ಸದಸ್ಯರು ಶಾಸಕರಿಗೆ ಮನವಿ ಮಾಡಿದರು. ತಾ.ಪಂ. ಸಭಾಂಗಣದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಮನವಿ ಸಲ್ಲಿಸಲಾಯಿತು.

ರಾಜ್ಯ ಸರಕಾರ ಕ್ರಿಯಾ ಯೋಜನೆ ತಯಾರಿಸುವಾಗ ಬಯಲುಸೀಮೆಯಂತೆ ಮಲೆನಾಡಿಗೆ ಕಡಿಮೆ ಪ್ರಮಾಣದ ಅನುದಾನ ಬಿಡುಗಡೆ ಮಾಡಬಾರದು. ಮಲೆನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಇಲ್ಲಿನ ಸರಕಾರಿ ಕಟ್ಟಡಗಳು ಸೋರುತ್ತಿವೆ. ಹಾಗಾಗಿ ಮಲೆನಾಡು ಭಾಗದ ಶಾಸಕರು ಪಕ್ಷಬೇಧ ಮರೆತು ಸರಕಾರದ ಗಮನ ಸೆಳೆದು ಹೆಚ್ಚು ಅನುದಾನ ತರಬೇಕು ಎಂದು ಜಿ.ಪಂ. ಸದಸ್ಯ ಪ್ರಭಾಕರ್‌ ತಿಳಿಸಿದರು.

 ಮಲೆನಾಡು ಭಾಗದಲ್ಲಿ 30 ಮಂದಿ ಶಾಸಕರು, 4 ಮಂದಿ ಸಂಸದರಿದ್ದಾರೆ. ಕಸ್ತೂರಿರಂಗನ್‌ ವರದಿಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಸರಕಾರ ಆ. 25ರೊಳಗೆ ಅμಡವಿಟ್‌ ಸಲ್ಲಿಸಬೇಕು. ಅದರ ಬಗ್ಗೆ ಮಲೆನಾಡು ಭಾಗದ ಶಾಸಕರು, ಸಂಸದರು ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು ಅತಿವೃಷ್ಟಿಯ ಬಗ್ಗೆ ಚಕಾರವೆತ್ತುತ್ತಿಲ್ಲ. ನಾನೊಬ್ಬನೇ ತಲೆಕೆಡಿಸಿಕೊಳ್ಳುವಂತಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ 94ಸಿ ಅಡಿಯಲ್ಲಿ 9462 ಅರ್ಜಿಗಳು ಬಂದಿದ್ದು, 1513 ಅರ್ಜಿ ಸಕ್ರಮಗೊಳಿಸಲಾಗಿದೆ. 818 ಹಕ್ಕುಪತ್ರ ವಿತರಿಸಲಾಗಿದೆ. 698 ಬಾಕಿ ಇದೆ. ಪಟ್ಟಣದಲ್ಲಿ 70 ಅರ್ಜಿಯ ಪೈಕಿ 5ಕ್ಕೆ ಹಕ್ಕುಪತ್ರ ವಿತರಿಸಲಾಗಿದೆ. 65 ಇತ್ಯರ್ಥವಾಗಿದ್ದು, ಬಾಕಿ ಉಳಿದಿಲ್ಲ. ಫಾ.ನಂ.53 ಯಲ್ಲಿ 3535 ಹಕ್ಕುಪತ್ರ ಇದುವರೆಗೆ ನೀಡಲಾಗಿದೆ. 

ಚುನಾವಣೆ ನಂತರ ಮೂವರು ತಹಶೀಲ್ದಾರರು ವರ್ಗಾವಣೆಯಾಗಿದ್ದಾರೆ. ಸರಕಾರಿ ಕಾರ್ಡ್‌ ತರಿಸಲು ಮುಂದಾಗುವ ಹೊತ್ತಿಗೆ ತಹಶೀಲ್ದಾರ್‌ಗಳು ವರ್ಗಾವಣೆಯಾಗಿದ್ದರಿಂದ ಉಳಿದ ಅರ್ಜಿ ವಿಲೇ ಆಗಿಲ್ಲ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದಾಗ, ಮಧ್ಯ ಪ್ರವೇಶಿಸಿದ ಶಾಸಕ ಎಂ.ಪಿ.ಕುಮಾರಸ್ವಾಮಿ, ಹಿಂದೆ ತಾನು ಶಾಸಕನಾಗಿದ್ದಾಗ ಅಂದಿನ ಕಂದಾಯ ಸಚಿವ ಶ್ರೀನಿವಾಸ್‌ ಪ್ರಸಾದ್‌ ಅವರ ಗಮನ ಸೆಳೆದು ಎಲ್ಲಾ ಅರ್ಜಿಗಳ ಇತ್ಯರ್ಥಕ್ಕೆ ಮುಂದಾಗಿದ್ದೆ. ಈ ವಿಚಾರದಲ್ಲಿ ಅಧಿಕಾರಿಗಳು ದಿಕ್ಕುತಪ್ಪಿದ್ದಾರೆ.

ಹಾಗಾಗಿ ಅರ್ಜಿಗಳು ನನೆಗುದಿಗೆ ಬಿದ್ದಿದೆ. ಆ.15ರ ಸ್ವಾತಂತ್ರ್ಯಾ ದಿನಾಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜಿ.ಜಾರ್ಜ್‌ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ. ಆಗ ಈ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರು.

 ಮೂಡಿಗೆರೆ ತಾಲೂಕಿನಲ್ಲಿ ಕಳಸ ಇನಾಂ ಭೂಮಿ ಸಮಸ್ಯೆ ಸುಪ್ರೀಂ ಕೋರ್ಟ್‌ ನಲ್ಲಿದೆ. ಮಸಗಲಿ ವಿಚಾರ ಸುಪ್ರಿಂ ಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ. ಅಲ್ಲಿನ ನಿವಾಸಿಗಳು ನಿರಾಶ್ರಿತರಾಗಬಹುದು. ಅಂಕೋಲ- ಹುಬ್ಬಳಿ ರೈಲ್ವೇ ಯೋಜನೆಗೆ ಅಲ್ಲಿ ನಿರಾಶ್ರಿತರಾದವರಿಗೆ ಕುದುರೆಮುಖದಲ್ಲಿ
ಜಾಗ ನೀಡಲು ಸ್ಥಳ ಆಯ್ದುಕೊಳ್ಳಲಾಗಿದೆ. ಇಲ್ಲಿ ಸ್ಥಳ ನೀಡಿದರೆ ಅರಣ್ಯ ನಾಶವಾಗುತ್ತದೆ. ಇಲ್ಲಿನ ನಿರಾಶ್ರಿತರಿಗೆ ಜಾಗವಿಲ್ಲ. ಅಲ್ಲಿನವರಿಗೆ ಜಾಗ ಕೊಟ್ಟರೆ ಇಲ್ಲಿಯವರನ್ನು ಎಲ್ಲಿಗೆ ಕಳುಹಿಸಬೇಕೆಂಬುದು ಪ್ರಶ್ನಿಸಿ, ಜಾಗ ನೀಡದಿರಲು ನಿರ್ಣಯ ಕೈಗೊಳ್ಳಲಾಯಿತು.

ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಮಾತನಾಡಿ, ಅತೀವೃಷ್ಟಿ ವಿಚಾರವಾಗಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡಲಾಗಿದೆ. ಮೂಡಿಗೆರೆಗೆ ಪ್ಯಾಕೇಜ್‌ ನೀಡದೇ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಇದು ಸರಿಯಲ್ಲ. ಕೊಡಗು ಜಿಲ್ಲೆ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಒಂದೇ ರೀತಿಯ ಮಳೆಯಾಗಿದೆ. ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಹಾಗಾಗಿ ಒಂದೇ ರೀತಿಯ ಪ್ಯಾಕೇಜ್‌ ನೀಡಬೇಕೆಂದು ನಿರ್ಣಯ ಕೈಗೊಳ್ಳಬೇಕು ಎಂದರು. ಇದಕ್ಕೆ ಸಭೆ ಸಮ್ಮತಿ ಸೂಚಿಸಿತು.
 
ತಾ.ಪಂ.ಉಪಾಧ್ಯಕ್ಷೆ ಸವಿತಾ ರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್‌ ಕುಮಾರ್‌, ಜಿ.ಪಂ. ಸದಸ್ಯರಾದ ಪ್ರಭಾಕರ್‌, ಅಮಿತಾ ಮುತ್ತಪ್ಪ, ಶಾಮಣ್ಣ, ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್‌, ಇಲಾಖೆ ಅಧಿಕಾರಿಗಳು ಹಾಜರಿದ್ದರು.

Trending videos

Back to Top