CONNECT WITH US  

ಮಳೆ ಕಡಿಮೆ; ಗಾಳಿ ಜೋರು

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅನೇಕ ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರ ಕಡಿಮೆಯಾಗಿದೆ ಆದರೆ ಭಾರೀ ಪ್ರಮಾಣದ ಗಾಳಿ ಬೀಸುತ್ತಿದೆ.ಅಲ್ಲಲ್ಲಿ ರಸ್ತೆ ಮತ್ತು ಮನೆಗಳ ಗುಡ್ಡ ಕುಸಿತ ಉಂಟಾಗುತ್ತಿದೆ. ಹೀಗಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆ ನಿಯಂತ್ರಣಕ್ಕೆ ಬಂದರೂ ಭೂ ಕುಸಿತ ಮುಂದುವರಿದಿರುವುದರಿಂದ ಜನ ಭಯಭೀತಗೊಂಡಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ಬಾವಿಯೊಂದು ಕುಸಿದಿದೆ. ಪ್ರೇಮಾಶೆಟ್ಟಿ ಎಂಬುವರ ಮನೆ ಸಮೀಪದ ಬಾವಿ ಕುಸಿದು ಪಕ್ಕದಲ್ಲೇ ಸುರಂಗದಂತೆ ಮಾರ್ಪಾಡಾಗಿದೆ. 

ಕೊಪ್ಪ ತಾಲೂಕಿನ ಹೇರೂರು ಗ್ರಾಮದ ದೂಬಳೆ ಕೈಮರ ಎಸ್ಟೇಟ್‌ ಸೇರಿದಂತೆ ಐದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತಡೆಗೋಡೆ ಸಹಿತ ಕುಸಿದು ಬಿದ್ದಿದ್ದು, ಸುಮಾರು 20 ಅಡಿ ಆಚೆಗೆ ಸಿಮೆಂಟ್‌ ತಡೆಗೋಡೆ ಕುಸಿದು ಹೋಗಿದೆ. ರಸ್ತೆ ಕುಸಿಯುತ್ತಿರುವುದರಿಂದ ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಪರ್ಯಾಯ ಮಾರ್ಗವಿಲ್ಲದೆ ಜನರು ಕಂಗಾಲಾಗಿದ್ದಾರೆ.

ಸಂಚಾರ ದಟ್ಟಣೆ: ಶಿರಾಡಿ ಘಾಟಿ ಸಂಚಾರ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಕರಾವಳಿ ಮಲೆನಾಡು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಚಾರ್ಮಾಡಿ ಘಾಟಿ ರಸ್ತೆ ಕಿರಿದಾಗಿದ್ದು, ಒಮ್ಮೆಗೆ ಸಾವಿರಾರು ವಾಹನಗಳು ಜಮಾಯಿಸುತ್ತಿರುವುದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಶನಿವಾರ ಬೆಳಗ್ಗೆ ಲಾರಿಯೊಂದು ಕೆಟ್ಟು ನಿಂತಿದ್ದರಿಂದ ಗಂಟೆಗಟ್ಟಲೆ ಐದು ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. 

ಟ್ರಾಫಿಕ್‌ ಜಾಮ್‌ನಿಂದ ಕೆಲ ಪ್ರಯಾಣಿಕರು ಕೊಟ್ಟಿಗೆಹಾರದಿಂದ ವಾಪಸ್‌ ಆದರೆ, ಅನೇಕ ಪ್ರಯಾಣಿಕರು ಟ್ರಾಫಿಕ್‌ ನಲ್ಲಿ ಸಿಲುಕಿ ಮುಂದೆ ಹೋಗಲೂ ಆಗದೇ ಹಿಂದೆ ಬರಲೂ ಆಗದೇ ಪರದಾಡುವಂತಾಗಿತ್ತು. ಮತ್ತೂಂದು ಕಡೆ ಘಾಟಿ ಪ್ರದೇಶದಲ್ಲಿ ಮಂಜು ಮತ್ತು ತುಂತುರು ಮಳೆ ಆವರಿಸಿರುವುದರಿಂದ ವಾಹನ ಚಾಲನೆ ಮಾಡುವುದು ಕಷ್ಟಕರವಾಗಿತ್ತು.


Trending videos

Back to Top