CONNECT WITH US  

ಬೆಳೆಗಾರರ ಬದುಕನ್ನೇ ಕಸಿದ ಮಳೆ!

ಶೃಂಗೇರಿ: ತಾಲೂಕಿನಾದ್ಯಂತ ಕಳೆದ 100 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಲೆನಾಡು ಅಕ್ಷರಶಃ ಮಳೆನಾಡಾಗಿ ಪರಿವರ್ತನೆಯಾಗಿದೆ ಬಹುತೇಕ ಎಲ್ಲಾ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿದೆ.

ಕಳೆದ ವರ್ಷ ಜನವರಿ 2017 ರಿಂದ ಆಗಸ್ಟ್‌ ಮಧ್ಯ ಭಾಗದವರೆಗೆ 1815 ಮಿ.ಮೀ ಮಳೆ ಅಂದರೆ 73 ಇಂಚು ಮಳೆ ಆಗಿತ್ತು. ಈ ವರ್ಷ ಇದೇ ಅವಧಿ ಗೆ 4056 ಮಿ.ಮೀ ಅಂದರೆ 162 ಇಂಚು ಮಳೆ ಈಗಾಗಲೇ ದಾಖಲೆಯಾಗಿದೆ ತಾಲೂಕಿನ ಅತಿವೃಷ್ಟಿ ಪ್ರದೇಶಗಳಾದ ಕೆರೆಕಟ್ಟೆ ಗ್ರಾಪಂ ವ್ಯಾಪ್ತಿ ಹಾಗೂ ಕಿಗ್ಗಾ ಭಾಗದಲ್ಲಿ ಮಳೆ 250 ಇಂಚಿಗೂ ಪ್ರಮಾಣ ಸಮೀಪಿಸುತ್ತಿದೆ. ಮಳೆ ಮಾಪನದ ಈ ಲೆಕ್ಕಾಚಾರವೇ ಈ ವರ್ಷದ ಅತೀವೃಷ್ಟಿಗೆ ಪುರಾವೇ ನೀಡುತ್ತದೆ.

ಪರಿಣಾಮ ತಾಲೂಕಿನ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫೀ, ಕಾಳುಮೆಣಸಿಗೆ ಹಾನಿಯಾಗಿದೆ ದುಡ್ಡಿನ ಬೆಳೆಗಳನ್ನೇ ನಂಬಿದ ಬೆಳೆಗಾರನ ಸ್ಥಿತಿ ಅಧೋಗತಿಗೆ ತಲುಪಿದೆ. ಡಿಸೆಂಬರ್‌ ಜನವರಿ ನಂತರದ ಆರ್ಥಿಕ ಸ್ಥಿತಿ ಬಗ್ಗೆ ಈಗಲೇ ನಡುಕ ಶುರುವಾಗಿದೆ ಮರ್ಯಾದೆ ಉಳಿಸಿಕೊಂಡರೆ ಸಾಕು ಎಂಬಂತಾಗಿದೆ. 

ಏಪ್ರಿಲ್‌ನಿಂದ ಆರಂಭಗೊಂಡ ಮಳೆ ಮೇ ಜೂನ್‌ ಜುಲೈ ತಿಂಗಳ ಜೊತೆಗೆ ಆಗಸ್ಟ್‌ ಮಧ್ಯ ಭಾಗದವರೆಗೂ ಎಡಬಿಡದೆ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಈ ಬಾರಿ ಸುರಿದ ಅತಿಯಾದ ಮಲೆನಾಡಿಲ್ಲಿ ರೈತರು, ಕಾಫಿ ಬೆಳೆಗಾರರು, ಅಡಿಕೆ ಬೆಳೆಗಾರರ ಬದುಕು ಕಸಿದುಕೊಂಡಿದೆ. ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತಾಗಿದೆ ರೈತರ ಸ್ಥಿತಿ. ತೋಟಗಾರಿಕಾ ಬೆಳೆ ಹಾನಿಯಾದ ಪರಿಣಾಮ ಬೆಳೆಗಾರರ ಸಾಲದ ಸುಳಿಗೆ ಸಿಲುಕುವಂತಾಗಿದೆ.  ಸುಮಾರು 100 ದಿನದಿಂದ ಸೂರ್ಯನ ಕಿರಣಗಳಿಗೆ ಗಿಡಮರಗಳ ಮೇಲೆ ಬಿದ್ದಿಲ್ಲ. ಇಂತಹ ನಿರಂತರವಾದ ಮಳೆಯನ್ನು ಇದುವರೆಗೂ ಕಂಡಿಲ್ಲ ಎಂದು ನಲ್ಲೂರಿನ ಕೃಷಿಕ ಅಕ್ಷಯ್‌ ಎನ್‌. ಆಚಾರಿ ಹೇಳುತ್ತಾರೆ. ಬಹುತೇಕ ಎಲ್ಲಾ ಬೆಳೆಗಳೆಲ್ಲವೂ ಈ ಬಾರಿ ಕೈಕೊಟ್ಟಿದೆ. ಸಣ್ಣ ಬೆಳೆಗಾರರಂತೂ ಮುಂದಿನ ಮಳೆಗಾಳದ ಹೊತ್ತಿಗೆ ಜೀವನ ನಡೆಸುವುದೆ ಕಷ್ಟ ಸಾಧ್ಯ ಎಂಬ ಸ್ಥಿತಿಗೆ ತಲುಪಿದ್ದಾರೆ.

ಕಳೆದ 5 ವರ್ಷಗಳ ಹಿಂದೆ ತಾಲೂಕಿನಲ್ಲಿ ಇದೆ ರೀತಿ 75 ದಿನಗಳಿಂದ ಸೂರ್ಯನ ಕಿರಣಗಳೆ ಕಾಣದೆ ನಿರಂತರವಾಗಿ ಮಳೆ ಸುರಿದಿದ್ದು, ಸುಮಾರು 150 ಇಂಚಿಗೂ ಹೆಚ್ಚು ಮಳೆಯಾಗಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿತ್ತು. ಅಂದು ಕೇಂದ್ರದ ಅಧ್ಯಯನ ತಂಡ ಕೇಂದ್ರಿಯ ಜಲ ಆಯೋಗದ ಕೆ.ಎಂ ಜಾಕೋಬ್‌, ವಿವೇಕ್‌ ಗೋಯೆಲ್‌ ಕೇಂದ್ರದ ಹಣಕಾಸು ಜಂಟಿ ನಿರ್ದೇಶಕ ಡಾ| ಬಿ.ಜಿ.ಎನ್‌. ರಾವ್‌ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರ್ಷ ಇದಕ್ಕೂ ಮಿರಿ ಅತಿವೃಷ್ಟಿಯಾಗಿ ಬೆಳೆಹಾನಿಯಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧ್ಯಯನ ತಂಡ ಇಲ್ಲಿಗೆ ಭೇಟಿ ನೀಡಿಲ್ಲ. ತೋಟಗಾರಿಕಾ, ಕೃಷಿ, ಕಂದಾಯ ಇಲಾಖಾ ಅಧಿಕಾರಿಗಳು ಕೂಡ ರೈತರ ತೋಟಗಳಿಗೆ ಭೇಟಿ ನೀಡದಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.

ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರ ಒತ್ತಾಯದ ಮೇರೆಗೆ ಇಲ್ಲಿಗೆ ಭೇಟಿ ನೀಡಿ ರೈತರೊಬ್ಬರ ತೋಟಕ್ಕೆ ಭೇಟಿ ನೀಡಿರುವುದು ಸ್ವಲ್ಪ ಮಟ್ಟಿಗೆ ರೈತ ವಲಯದಲ್ಲಿ ಸಮಾಧಾನ ತಂದಿದೆ. ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಸಚಿವರೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಮಳೆ ಕಡಿಮೆಯಾಗದೆ ಹಾನಿಯ ಬಗ್ಗೆ ಸಮೀಕ್ಷಾ ಕಾರ್ಯ ನಡೆಸಲು ಕಷ್ಟಸಾಧ್ಯವಾಗುತ್ತದೆ. ಮಳೆ ಕಡಿಮೆಯಾದ ತಕ್ಷಣವೇ ಸರ್ಕಾರಕ್ಕೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

 ವಾಣಿಜ್ಯ ಬೆಳೆ ಬೆಳೆಯುತ್ತಾ ಪ್ರತಿವರ್ಷವು ರಾಜ್ಯದ ಮತ್ತು ಕೇದ್ರದ ಬೊಕ್ಕಸಕ್ಕೆ ಕೋಟ್ಯಂತರ ರೂ. ತೆರಿಗೆ ಕಟ್ಟುತ್ತಿದ್ದಾರೆ ಇಲ್ಲಿಯ ರೈತರು. ಮಲೆನಾಡಿನ ರೈತರನ್ನು ಸರ್ಕಾರ ಕೈಹಿಡಿಯುತ್ತದೆಯೇ ಎನ್ನುವುದನ್ನು ಕಾದುನೋಡಬೇಕಿದೆ.

ತಾಲೂಕಿನಲ್ಲಿ ಅಡಿಕೆ ಉತ್ಪಾದನೆ 1434 ಟನ್‌. ಗಳಿಕೆ ರೂ. 43 ಕೋಟಿಗಳಷ್ಟು ಆಗಿರುತ್ತದೆ. ಇದರಲ್ಲಿ ಕಡಿಮೆ ಎಂದರು ಶೇ.40 ರಷ್ಟು ತೋಟಗಾರಿಕಾ ಬೆಳೆ ನಾಶವಾಗಿರುವುದರಿಂದ ಬೆಳೆಗಾರರ ಆದಾಯದಲ್ಲಿ ತೀವ್ರ ಕುಸಿತ ಆಗಿರುವುದರಿಂದ ರೈತರ ಬದುಕು ದುಸ್ಥರವಾಗಿದೆ. ಮುಖ್ಯ ಬೆಳೆ ಅಡಿಕೆಯೊಂದರಲ್ಲಿ ಶೇ.40 ರಿಂದ 60 ಬೆಳೆ ನಾಶವಾಗಿರುವುದರಿಂದ ಒಟ್ಟು ಉತ್ಪಾದನೆ 1434 ಟನ್‌ ಅಡಿಕೆಯಲ್ಲಿ ಶೇ.40 ರಷ್ಟು ಕ್ವಿಂಟಾಲಿಗೆ 30.000 ರೂ. ಗಳಂತೆ ಲೆಕ್ಕಾ ಹಾಕಿದರೆ ಅಡಿಕೆಯೊಂದರಲ್ಲೇ 18 ರಿಂದ 20 ಕೋಟಿ ರೂ. ನಷ್ಟ ಸಂಭವಿಸಿದೆ. ಎಲ್ಲಾ ತೋಟಗಾರಿಕಾ ಬೆಳೆಗಳನ್ನು ಗಣನೆಗೆ ತೆಗೆದುಕೊಂಡಾಗ 40 ರಿಂದ 50 ಕೋಟಿ ರೂ. ನಷ್ಟವಾಗಿದೆ.  ಶ್ರೀ ಕೃಷ್ಣ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

„ರಮೇಶ ಕರುವಾನೆ

Trending videos

Back to Top