CONNECT WITH US  

3 ಜಿಲ್ಲೆಗಳನ್ನು ರಾಷ್ಟ್ರೀಯ ವಿಪತ್ತುಪ್ರದೇಶವೆಂದು ಘೋಷಿಸಲು ಒತ್ತಾಯ

ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ ಅತಿ ಹೆಚ್ಚು ಹಾನಿಯಾಗಿರುವ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು
ಜಿಲ್ಲೆಗಳನ್ನು ರಾಷ್ಟ್ರೀಯ ವಿಪತ್ತು ಪ್ರದೇಶಗಳೆಂದು ಘೋಷಿಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ
ಬಿ.ಎಸ್‌.ಜಯರಾಂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಈ ಬಾರಿ ಅತಿವೃಷ್ಟಿಯಿಂದಾಗಿ ಸಾವಿರಾರು ಎಕರೆ ಕಾಫಿ ತೋಟಗಳು
ನಾಶವಾಗಿವೆ. ಕರ್ನಾಟಕ ಬೆಳೆಗಾರರ ಸಂಘ ಈ ಸಂಬಂಧ ಖುದ್ದು ಸಮೀಕ್ಷೆ ನಡೆಸಿ ಅಂಕಿ ಅಂಶಗಳ ಸಹಿತ ಮಾಹಿತಿ ಕಲೆ ಹಾಕಿದೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ 5 ಸಾವಿರ ಎಕರೆ ಕಾಫಿ ತೋಟಗಳಿಗೆ ಹಾನಿಯಾಗಿದ್ದು, ಅಂದಾಜು 4 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ರಾಷ್ಟ್ರೀಯ ವಿಪತ್ತು ಪ್ರದೇಶ ಎಂದು ಕೇಂದ್ರ ಸರಕಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಕೆಜಿಎಫ್‌ ಸದಸ್ಯರು ಇತ್ತೀಚೆಗೆ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ  ಅತಿವೃಷ್ಟಿಯಿಂದಾಗಿರುವ ಹಾನಿಯ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಡಗು ಜಿಲ್ಲೆಯೊಂದರಲ್ಲಿ ಅಂದಾಜು
4500 ಎಕರೆ ಕಾಫಿ ತೋಟಗಳಿಗೆ ಹಾನಿಯಾಗಿದ್ದು, 3 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಕೊಡಗಿನಲ್ಲಿ
ಶೇ.100 ರಷ್ಟು ಬೆಳೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.50 ರಷ್ಟು ಕಾಫಿ, ಕಾಳು ಮೆಣಸು ಬೆಳೆ
ನಷ್ಟವಾಗಿದ್ದರೆ, ಹಾಸನ ಜಿಲ್ಲೆಯಲ್ಲಿ ಶೇ. 65-70 ರಷ್ಟು ಬೆಳೆ ಹಾನಿಯಾಗಿದೆ ಎಂದು ವಿವರಿಸಿದರು.

ಅತಿವೃಷ್ಟಿಯಿಂದಾಗಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರ ಬದುಕು ಅತಂತ್ರಗೊಂಡಿರುವುದರಿಂದ ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯ ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ ಅವರು, ಕೊಡಗಿನಲ್ಲಿ ಉಂಟಾದ ಭೀಕರ ಅತಿವೃಷ್ಟಿಗೆ ವಾಡಿಕೆಗಿಂತ ಅತೀ ಹೆಚ್ಚು ಮಳೆಯಾಗಿರುವುದೇ ಕಾರಣ. ಅಲ್ಲಿನ ಭೂಮಿಗೆ ತೇವಾಂಶ ಹಾಗೂ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚು ಮಳೆ ಸುರಿದ ಕಾರಣ ಭೂ ಕುಸಿತ ಉಂಟಾಗಿದೆ. ಅಲ್ಲಿನ ಸಾವಿರಾರು ಬೆಳೆಗಾರರ ಬದುಕಿಗೆ ಆಧಾರವಾಗಿದ್ದ ಕಾಫಿ ತೋಟಗಳು ಜಲ ಸಮಾಧಿಯಾಗಿವೆ.

ಅತಿವೃಷ್ಟಿ ತೋಟಗಳನ್ನು ಕಳೆದುಕೊಂಡವರಿಗೆ ಸರ್ಕಾರ ಬದಲಿ ಭೂಮಿ ನೀಡಬೇಕೆಂದು ಅಲ್ಲಿನ ಬೆಳೆಗಾರರು ಮನವಿ
ಮಾಡಿದ್ದು, ಸರ್ಕಾರ ಈ ಸಂಬಂಧ ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಕ್ರಮವಹಿಸಬೇಕು ಎಂದು ಹೇಳಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು. ಎಂ.ತೀರ್ಥಮಲ್ಲೇಶ್‌ ಮಾತನಾಡಿ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲ ಬೆಳೆಗಾರರು ನಿರ್ಮಿಸಿಕೊಂಡಿರುವ ಹೋಂ ಸ್ಟೇಗಳಿಂದಾಗಿ ಭೂ ಕುಸಿತದಂತಹ ಘಟನೆಗಳು ಸಂಭವಿಸಿವೆ ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಕೊಡಗಿನ ಪಟ್ಲಾ, ಮಾದಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹೋಂ ಸ್ಟೇಗಳೇ ಇಲ್ಲ. ಆದರೂ ಆ ಭಾಗದಲ್ಲಿ ಹೆಚ್ಚು ಭೂ ಕುಸಿತ ಉಂಟಾಗಿದೆ. ಕೆಲವರು ಸರ್ಕಾರದಿಂದ ಪರವಾನಿಗೆ ಪಡೆದು ಹೋಂಸ್ಟೇಗಳ ಪರಿಕಲ್ಪನೆಗೆ ವಿರುದ್ಧವಾಗಿ ವ್ಯಾಪಾರ ವಹಿವಾಟು
ನಡೆಸುತ್ತಿದ್ದಾರೆ. ಇದರಿಂದ ಹೋಂಸ್ಟೇಗಳು ಮನಬಂದಂತೆ ನಿರ್ಮಾಣವಾಗುತ್ತಿವೆ. ಇದಕ್ಕೆ ಸರ್ಕಾರದ ಕಡಿವಾಣ
ಅಗತ್ಯ. ಆದರೆ ಅತಿವೃಷ್ಟಿ ಹಾನಿಗೆ ಹೋಂ ಸ್ಟೇಗಳೇ ಕಾರಣ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಎಂ.ಕೆ.ಪ್ರದೀಪ್‌, ಪ್ರದೀಶ್‌, ಲಿಂಗಪ್ಪಗೌಡ, ಬಾಲಕೃಷ್ಣ, ಆಲ್ದೂರು ಸುರೇಶ್‌, ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು. 

ಅತಿವೃಷ್ಟಿಗೆ ಕಾಫಿ ಬೆಳೆಗಾರರೇ ಕಾರಣ ಎಂದು ಕೆಲ ಪರಿಸರವಾದಿಗಳು ಆರೋಪ ಮಾಡುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ, ಹಾರಂಗಿ ಜಲಾಶಯದ ನೀರನ್ನು ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ ದಿಢೀರ್‌ ಹೊರಕ್ಕೆ ಬಿಟ್ಟ ಪರಿಣಾಮ ಎಲ್ಲೆಡೆ ಪ್ರವಾಹ, ನೆರೆ ಆವರಿಸುವಂತಾಯಿತು. ಇದನ್ನು ಬೆಂಗಳೂರಿನ ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿಯೊಬ್ಬರು ಸ್ಪಷ್ಟ ಪಡಿಸಿದ್ದಾರೆ. ಇದನ್ನು ಪರಿಸರವಾದಿಗಳು ಮನಗಾಣಬೇಕು.
ಬಿ.ಎಸ್‌.ಜಯರಾಂ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ

Trending videos

Back to Top