CONNECT WITH US  

ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಸಿಎಂ ಸಮ್ಮತಿ

ಚಿಕ್ಕಮಗಳೂರು: ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿವಿಧ ಪಕ್ಷ ಹಾಗೂ ಸಂಘಟನೆಗಳು ತಿಳಿಸಿವೆ.

ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಆ.25 ರಂದು ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್‌.ಧರ್ಮೇಗೌಡ ಹಾಗೂ ಎಸ್‌.ಎಲ್‌.ಬೋಜೇಗೌಡ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಕುಂದುಕೊರತೆಗಳನ್ನು
ನಿವಾರಿಸಿ ಮೇಲ್ದರ್ಜೆಗೇರಿಸಲಾಗುವುದು. ಈ ಬಗ್ಗೆ ಸೆ.3 ರ ನಂತರ ಚಿಕ್ಕಮಗಳೂರಿಗೆ ಭೇಟಿ ಕೊಟ್ಟು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

ಶತಮಾನದಷ್ಟು ಹಳೆಯದಾದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳ ಕೊರತೆ ಮತ್ತು ತಂತ್ರಜ್ಞರು ಹಗೂ ಸಿಬ್ಬಂದಿ ಹುದ್ದೆ ಖಾಲಿ ಬಿದ್ದಿದೆ. ಮೂಲ ಸೌಲಭ್ಯಗಳಿಲ್ಲದೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ರೋಗಿಗಳ
ತಪಾಸಣೆ ಮತ್ತು ಶವಪರೀಕ್ಷೆ ಎರಡನ್ನೂ ಒಬ್ಬರೇ ವೈದ್ಯರು ನಡೆಸಬೇಕಿದೆ. ಬೆಳಗ್ಗೆ ಒಳರೋಗಿಯಾಗಿ ದಾಖಲಾಗುವ ವ್ಯಕ್ತಿಯನ್ನು ಇಡೀ ದಿನ ಯಾವ ವೈದ್ಯರೂ ಮಾತನಾಡಿಸಲು ಬಾರದ ಸ್ಥಿತಿ ಇದೆ. ಈ ಎಲ್ಲ ಸಮಸ್ಯೆಗಳನ್ನು ಮುಂದಿನ 15 ದಿನಗಳಲ್ಲಿ ಸರಿಪಡಿಸದಿದ್ದಲ್ಲಿ ಚಳವಳಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕರಗಡ-ಸಿಎಂ ಸೂಚನೆ: ತಾಲೂಕಿನ ಬಯಲು ಭಾಗದ ಕೆರೆಗಳಿಗೆ ನೀರು ತುಂಬಿಸುವ ಕರಗಡ ಯೋಜನೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಕರಗಡ ಕುಡಿಯುವ ನೀರಿನ ಯೋಜನೆ ಹೋರಾಟ ಸಮಿತಿ ಸಂಚಾಲಕ ಗುರುಶಾಂತಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು. 

ಕಾಮಗಾರಿಗೆ ಅಗತ್ಯವಿರುವ ಹಣ ಬಿಡುಗಡೆಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ತಿಳಿಸಿದ ಸಿಎಂ, ಯೋಜನೆಗೆ ಮೊದಲ ಬಾರಿಗೆ ನಾವೇ ಅನುದಾನ ಬಿಡುಗಡೆ ಮಾಡಿದ್ದು, ಇದೀಗ ನಮ್ಮ ಆಡಳಿತದಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

200 ಕೆ.ವಿ. ವಿದ್ಯುತ್‌ ಪರಿವರ್ತಕ ಮತ್ತು 200 ಎಚ್‌.ಪಿ. ಮೋಟಾರ್‌ ಅಳವಡಿಸಿ ದೇವೀಕೆರೆಯಿಂದ ಕರಗಡ ಕಾಲುವೆಗೆ ನೀರು ಹರಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಎಂದು ಹೇಳಿದರು. 

ಅಧಿಕಾರಿಗಳು ಈ ಕೆಲಸವನ್ನು ಬೇಗನೆ ಮಾಡಿದರೆ 3 ತಿಂಗಳ ಕಾಲ ಚಾನಲ್‌ನಲ್ಲಿ ನೀರು ಹರಿದು ಕಳಸಾಪುರ, ತಿಮ್ಮರಾಯಪ್ಪನ ಕೆರೆ ಮತ್ತು ಈಶ್ವರಳ್ಳಿ ಕೆರೆಗಳು ತುಂಬುತ್ತವೆ. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸ್ಥಳದಲ್ಲಿದ್ದ ಸಣ್ಣ ನೀರಾವರಿ ಸಚಿವರು ಸಹ ಭರವಸೆ ನೀಡಿದ್ದಾರೆ ಎಂದರು.

ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ, ಎರಡು ಬಾರಿ ವರ್ಕ್‌ಸ್ಲಿಪ್‌ ಮಾಡಲಾಗಿದೆ ಎನ್ನುವ ದೂರುಗಳ ಬಗ್ಗೆ ತನಿಖೆ ಮಾಡಿಸುವುದಾಗಿಯೂ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಯೋಜನೆಯಲ್ಲಿ ಅವ್ಯವಹಾರ ನಡೆದಿದೆ, ತನಿಖೆ ನಡೆಸಬೇಕು ಎಂದು ಶಾಸಕ ಸಿ.ಟಿ.ರವಿ ಆರೋಪ ಮಾಡುತ್ತಿದ್ದು, ಅವರು ಯಾರ ಕಡೆ ಬೊಟ್ಟು ಮಾಡುತ್ತಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ಟೀಕಿಸಿದರು.

ಸ್ವತಃ ಕಾಲುವೆಗೆ ಇಳಿದು ಮೂರ್‍ನಾಲ್ಕು ಬಾರಿ ಮಣ್ಣು ತೆಗೆದುಹಾಕಿದಾಗಲೂ ಅವ್ಯವಹಾರ ನಡೆದಿರುವುದು ಅವರಿಗೆ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಮಗಾರಿಯ ಮೊದಲ ಹಂತದ ಕಾಮಗಾರಿಯಲ್ಲಿ ಶಾಸಕರ ಗಂಭೀರ ಪ್ರಯತ್ನ ಇರಲಿಲ್ಲ. ಈಗಲೂ ಇದರಲ್ಲಿ ರಾಜಕೀಯ ಬೆರೆಸದೆ ರೈತರ ನೆರವಿಗೆ ಧಾವಿಸಬೇಕು ಎಂದರು. 

15 ದಿನ ಗಡುವು: ಇದೇ ವೇಳೆ ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಪದವಿ ಪೂರ್ವ ಕಾಲೇಜು ಶಿಥಿಲಾವಸ್ಥೆಗೆ ತಲುಪಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾಲೇಜಿನ ಎಲ್ಲ 13 ಕೊಠಡಿಗಳು ಸೋರುತ್ತಿವೆ. ಶೀತದ ವಾತಾವರಣದಿಂದ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಆಗುತ್ತಿದೆ. ಕಿಟಕಿಗಳಲ್ಲೆವೂ ಕಿತ್ತುಹೋಗಿದೆ. ಮೇಲ್ಚಾವಣಿ ಉದುರುತ್ತಿದೆ. 

ಉತ್ತಮ ಪ್ರಯೋಗಾಲಯ ಇದ್ದರೂ ಕೊಠಡಿಗಳು ಸೋರುವ ಕಾರಣ ಅಲ್ಲಿರುವ ಸಲಕರಣೆಗಳು ಹಾಳಾಗುತ್ತಿವೆ. ವಿದ್ಯಾರ್ಥಿಗಳು, ಪೋಷಕರು ಭಯದಲ್ಲೇ ಕಾಲ ತಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ 15 ದಿನದಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಸೆ.18 ರಂದು ವಿದ್ಯಾರ್ಥಿ ಪೋಷಕರೊಂದಿಗೆ ಸೇರಿ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

 ಜನದನಿ ಸಂಚಾಲಕ ಬಿ.ಅಮ್ಜದ್‌, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್‌ ದಸಂಸ ಸಂಚಾಲಕ ಮರ್ಲೆ ಅಣ್ಣಯ್ಯ ಉಪಸ್ಥಿತರಿದ್ದರು ಕರಗಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ, ಎರಡು ಬಾರಿ ವರ್ಕ್‌ಸ್ಲಿಪ್‌ ಮಾಡಲಾಗಿದೆ ಎನ್ನುವ ದೂರುಗಳ ಬಗ್ಗೆ ತನಿಖೆ ಮಾಡಿಸುವುದಾಗಿಯೂ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ತಿಳಿಸಿದರು.
 
ಯೋಜನೆಯಲ್ಲಿ ಅವ್ಯವಹಾರ ನಡೆದಿದೆ, ತನಿಖೆ ನಡೆಸಬೇಕು ಎಂದು ಶಾಸಕ ಸಿ.ಟಿ.ರವಿ ಆರೋಪ ಮಾಡುತ್ತಿದ್ದು, ಅವರು ಯಾರ ಕಡೆ ಬೊಟ್ಟು ಮಾಡುತ್ತಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದರು. ಸ್ವತಃ ಕಾಲುವೆಗೆ ಇಳಿದು ಮೂರ್‍ನಾಲ್ಕು ಬಾರಿ ಮಣ್ಣು ತೆಗೆದುಹಾಕಿದಾಗಲೂ ಅವ್ಯವಹಾರ ನಡೆದಿರುವುದು ಅವರಿಗೆ ಗೊತ್ತಾಗಲಿಲ್ಲವೇ
ಎಂದು ಪ್ರಶ್ನಿಸಿದ ಅವರು, ಕಾಮಗಾರಿಯ ಮೊದಲ ಹಂತದಲ್ಲಿ ಶಾಸಕರ ಗಂಭೀರ ಪ್ರಯತ್ನ ಇರಲಿಲ್ಲ. ಈಗಲೂ ಇದರಲ್ಲಿ ರಾಜಕೀಯ ಬೆರೆಸದೆ ರೈತರ ನೆರವಿಗೆ ಧಾವಿಸಬೇಕು


Trending videos

Back to Top