CONNECT WITH US  

ಸಮಾಜಮುಖೀ ಕಾರ್ಯ ಕೈಗೊಳ್ಳಿ

ಚಿಕ್ಕಮಗಳೂರು: ಮಹಿಳೆಯರು ಕ್ರಿಯಾಶೀಲರಾಗಿರಲು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ನಾಯಕತ್ವ ಗುಣವನ್ನು ಹೊಂದಿ ಸಮಾಜಮುಖೀ ಕೆಲಸಗಳನ್ನು ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಎಂ.ಎಲ್‌. ವೈಶಾಲಿ ತಿಳಿಸಿದರು.

ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿಯೇ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಹೆಚ್ಚು ಸದಸ್ಯರನ್ನು ಹೊಂದಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಿಕೊಂಡು ರಾಜ್ಯಕ್ಕೆ ಮಾದರಿ ಸಂಘವಾಗಿ ಬೆಳೆದಿದೆ ಎಂದರು.
 
ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ದುಡಿದು ಪುರುಷರಿಗೆ ಸರಿಸಮಾನರಾಗಿ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಆಧುನಿಕತೆಯಲ್ಲಿ ನಮ್ಮ ಭಾಷೆ- ಸ್ಕೃತಿಯನ್ನು ಮರೆಯದೆ ಯುವಪೀಳಿಗೆಗೂ ಉತ್ತಮ ಮಾರ್ಗದರ್ಶನ ನೀಡಬೇಕು ಎಂದರು.

ಮಹಿಳೆಯರು ಮದುವೆಯಾದ ಮೇಲೆ ತಮ್ಮ ಪ್ರತಿಭಾ ಕೌಶಲ್ಯ ಬಿಡದೆ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು
ತಮ್ಮ ಪ್ರತಿಭೆ ತೋರಿಸಬೇಕು. 40 ವರ್ಷ ಆದ ಮಹಿಳೆಯರು ಮಾನಸಿಕ ಖನ್ನತೆಗೆ ಒಳಗಾಗದೆ ಪ್ರತಿನಿತ್ಯ ಯೋಗ, ಧ್ಯಾನದ ಜತೆಗೆ ಸಮಾಜಮುಖೀ ಕೆಲಸಗಳಲ್ಲಿ ತೋಡಗಿಸಿಕೊಳ್ಳಬೇಕು ಎಂದರು. 

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ| ಡಿ.ಎಲ್‌.ವಿಜಯ್‌ಕುಮಾರ್‌ ಮಾತನಾಡಿ, ಮಹಿಳಾ ಸಂಘವು ಪ್ರತಿವರ್ಷ ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡುವುದರ ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜನಾಂಗದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತೋಷದ ವಿಷಯ ಎಂದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷ ಸ್ಮಿತಾ ಸುನೀಲ್‌ ಮಾತನಾಡಿ, ನಮ್ಮ ಸಂಘ ಆರಂಭವಾಗಿ 13 ವರ್ಷವಾಗಿದೆ. ಹೆಚ್ಚಿನ ಸದಸ್ಯರನ್ನು ಹೊಂದಿ ಉತ್ತಮ ಆಡಳಿತ ನೀಡಿ ರಾಜ್ಯ ಮಟ್ಟದಲ್ಲಿ ನಮ್ಮ ಸಂಘಕ್ಕೆ ಉತ್ತಮ ಹೆಸರಿದೆ ಎಂದರು. 

ಸಂಘದ ವತಿಯಿಂದ ಸ್ವಂತ ನಿವೇಶನ ಮಾಡಲಾಗಿದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ಮಿಸಲಾಗುವುದು. ಎಲ್ಲರೂ ಹೆಚ್ಚಿನ
ಸಹಕಾರ ನೀಡಬೇಕು. ಸೆ. 30ರಂದು ಎ.ಐ.ಟಿ ಕಾಲೇಜಿನ ಆವರಣದಲ್ಲಿ ಚಿಕ್ಕಮಗಳೂರು ಮೇಳ ಮಹಿಳಾ
ಕಾರ್ಯಕ್ರಮ ಆಯೋಜಿಸಲಾಗಿದೆ.

ಮಹಿಳಾ ಸದಸ್ಯರಿಗೆ ನೇಪಾಳ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಉಪಾಧ್ಯಕ್ಷ ಕೆ.ಎಸ್‌. ನಾರಾಯಣಗೌಡ, ಕಾರ್ಯದರ್ಶಿ ಕೆ.ಬಿ. ಅನಂತೇಗೌಡ, ಮಹಿಳಾ ಸಂಘದ ಉಪಾಧ್ಯಕ್ಷೆ ಬಿ.ಸಿ. ಗೀತಾ, ಕಾರ್ಯದರ್ಶಿ
ಸಾದ್ವಿ ಮಧುಸೂದನ್‌, ಅನ್ವಯಕೀರ್ತಿ, ಪಾಲಾಕ್ಷಿ ಚನ್ನೇಗೌಡ, ಶಾರದಾ ಗೋಪಾಲ್‌, ಯಶೋದಾ ಶಿವಪ್ಪ, ಜಯಶ್ರೀರಮೇಶ್‌, ಶ್ವೇತಾ ವಿಶ್ವ, ದೀಪ್ತಿ ರಮೇಶ್‌, ಹೇಮರಾಜು, ಸುಧಾ ಜುಂಜೇಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು ನಂತರ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು 


Trending videos

Back to Top