CONNECT WITH US  

ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಮೂಲ

ಬಾಳೆಹೊನ್ನೂರು: ಜೀವನ ಒಂದು ಹೂದೋಟ. ನಾವು ಅಲ್ಲಿಯ ಹೂಗಳು. ಶ್ರೇಷ್ಠವಾದ ಮಾನವ ಜನ್ಮ ಪ್ರಾಪ್ತವಾಗಿದೆ. ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಉನ್ನತಿ ಕಾಣಲು ಸಾಧ್ಯ. ಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಮೂಲವಾಗಿದೆ ಎಂದು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಕೈಗೊಂಡ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಬಾಳೆಹೊನ್ನೂರು ಖಾಸಾ ಶಾಖಾ ಎಡೆಯೂರು ಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳವರ 71ನೇ ಜನ್ಮ ದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕರ್ತವ್ಯದ ಕಾಲುದಾರಿ ಕೀರ್ತಿಯ ಹೆದ್ದಾರಿ. ಅಧಿಕಾರ ಸಂಪತ್ತು ಬೆನ್ನು ಹತ್ತಿದ ಮನುಷ್ಯ ನಿಜದರಿವಿನಿಂದ ದೂರವಿದ್ದಾನೆ. ಸುಖವೇ ಬರಲಿ ದು:ಖವೇ ಬರಲಿ ಯಾವಾಗಲೂ ಸಮತೋಲನದಿಂದ ಬಾಳಿದ್ದಾದರೆ
ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ. ವೀರಶೈವ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಶ್ರೀ ಗುರುವಿನ ಮಹತ್ವ ಮತ್ತು ಅವನ ಬೋಧನೆಗಳು ಜೀವನ ವಿಕಾಸಕ್ಕೆ ಅಡಿಪಾಯ ಎಂದರು.

ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ಶ್ರೀ ರಂಭಾಪುರಿ ಪೀಠ ಪರಂಪರೆಯ ಜಗದ್ಗುರು ತ್ರಯರ ಸೇವೆ
ಮಾಡಿದ ಸೌಭಾಗ್ಯ ಅವರದು. ಭಾವನಾ ಜೀವಿಗಳಾದ ಶ್ರೀಗಳು ನಿರಂತರ ಚಟುವಟಿಕೆ ಹೊಂದಿ ಭಕ್ತರ ಭಾವನೆಗಳಿಗೆ ಸ್ಪಂದಿಸಿ ಕಾರ್ಯ ಮಾಡುತ್ತ ಬಂದಿದ್ದಾರೆ. 71ನೇ ಜನ್ಮ ದಿನೋತ್ಸವ ಪರ್ವ ಕಾಲದಲ್ಲಿ ಅವರಿಗೆ ಶ್ರೀ ರಂಭಾಪುರಿ
ಪೀಠದಿಂದ ಸುಜನಾಲಿ ಸಂರಕ್ಷಣಾಚಾರ್ಯ ಪ್ರಶಸ್ತಿ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳು ಎಡೆಯೂರು ಶ್ರೀಗಳವರ ಕ್ರಿಯಾಶೀಲ ಬದುಕಿನ ನೆನಹುಗಳನ್ನು ಸಭಿಕರಿಗೆ ಮನವರಿಕೆ ಮಾಡಿದರು.
 
71ನೇ ಜನ್ಮ ದಿನೋತ್ಸವ ಆಚರಿಸಿಕೊಂಡ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಮ್ಮ ಜೀವನದಲ್ಲಿ ಎಂದಿಗೂ ಮರೆಯಲಾರದ ಅವಿಸ್ಮರಣೀಯ ದಿನ. ಶ್ರೀ ಪೀಠದ ಜಗದ್ಗುರು ತ್ರಯರ ಸೇವೆ ಮಾಡಿದ ಪ್ರತಿಫಲ ಇಂದು ನಡೆದಿರುವ ಸಮಾರಂಭವೆಂದು ಭಾವಿಸುತ್ತೇವೆ. ಶ್ರೀ ಪೀಠದ ಸೇವೆಯನ್ನು ಅನವರತ ಕಾಲ ಮಾಡಿ ಸಮಾಜಕ್ಕೆ ಗುರು ಪೀಠಗಳ ಹಿರಿಮೆ ಮನವರಿಕೆ ಮಾಡಿಕೊಡುವುದೇ ನಮ್ಮ ಗುರಿಯಾಗಿದೆ ಎಂದರು.

ಹುಲಿಕೆರೆ, ಮಾದಿಹಳ್ಳಿ, ಬೇರುಗಂಡಿ, ಅಕ್ಕಿಆಲೂರು, ಕಾರ್ಜುವಳ್ಳಿ, ತುಪ್ಪದ ಕುರಹಟ್ಟಿ, ಚನ್ನಗಿರಿ, ಅಂಬಲದೇವರಹಳ್ಳಿ, ಹಣ್ಣೆ ಮೊದಲಾದ ಶ್ರೀಗಳು ಪಾಲ್ಗೊಂಡಿದ್ದರು.  


Trending videos

Back to Top