CONNECT WITH US  

ತಂಡಗ ತಾಪಂ ಕ್ಷೇತ್ರ ಮತ್ತೆ ಕೈ ವಶ

ಹೊಸದುರ್ಗ: ತಾಲೂಕು ಪಂಚಾಯತ್‌ದ ತಂಡಗ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಬುಧವಾರ
ಪ್ರಕಟಗೊಂಡಿದ್ದು, ಕಾಂಗ್ರೆಸ್‌ನ ಪುಟ್ಟಾ ನಾಯ್ಕ ಜಯ ಗಳಿಸಿದ್ದಾರೆ. ಈ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ
ಕಾಂಗ್ರೆಸ್‌ ಸಫಲವಾಗಿದೆ.

ಕಾಂಗ್ರೆಸ್‌ನ ಕೃಷ್ಣ ನಾಯ್ಕ ಅವರ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಗೆ ಕಾಂಗ್ರೆಸ್‌ನ ಪುಟ್ಟಾ ನಾಯ್ಕ ಹಾಗೂ ಬಿಜೆಪಿಯಿಂದ ಹರೀಶ್‌ ಸ್ಪರ್ಧಿಸಿದ್ದರು. ಪುಟ್ಟಾ ನಾಯ್ಕ ಅವರು ತಮ್ಮ ಪ್ರತಿಸ್ಪರ್ಧಿಯನ್ನು 339
ಮತಗಳ ಅಂತರದಿಂದ ಪರಾಭವಗೊಳಿಸಿದರು. ಕಾಂಗ್ರೆಸ್‌ ಅಭ್ಯರ್ಥಿ 2782 ಮತಗಳನ್ನು ಪಡೆದು ಜಯಶಾಲಿಯಾದರೆ, ಬಿಜೆಪಿಯ ಹರೀಶ್‌ 2443 ಮತಗಳನ್ನು ಗಳಿಸಿ ಸೋಲು ಅನುಭವಿಸಿದರು.  ಫಲಿತಾಂಶ ಪ್ರಕಟಗೊಂಡ ತಕ್ಷಣ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂನ ಶ್ರೀರಾಂಪುರ ಕ್ಷೇತ್ರದ ಸದಸ್ಯ ಕೆ. ಅನಂತ್‌, ಶಾಸಕ ಬಿ.ಜಿ. ಗೋವಿಂದಪ್ಪನವರ ಅಭಿವೃದ್ಧಿ
ಕಾರ್ಯಕ್ರಮಗಳು ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದರು. 

ತಂಡಗ ತಾಪಂ ಕ್ಷೇತ್ರದಿಂದ ಚುನಾಯಿತರಾದ ಪುಟ್ಟಾ ನಾಯ್ಕ ಮಾತನಾಡಿ, ಶಾಸಕ ಬಿ.ಜಿ. ಗೋವಿಂದಪ್ಪ ಹಾಗೂ
ಕಾಂಗ್ರೆಸ್‌ ಕಾರ್ಯಕರ್ತರ ಸಹಕಾರ ಹಾಗೂ ತಂಡಗ ಕ್ಷೇತ್ರದ ಮತದಾರರ ಆಶೀರ್ವಾದಿಂದ ಗೆಲುವು ಸಾಧಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಪುರಸಭೆ ಸದಸ್ಯ ದಳವಾಯಿ ವೆಂಕಟೇಶ್‌, ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು. 

ಬಿಜೆಪಿ ಪರಾಮರ್ಶೆ ಸಭೆ: ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಬಿಜೆಪಿ ಮುಖಂಡರು
ಪರಾಮರ್ಶೆ ಸಭೆ ನಡೆಸಿದರು. ತಂಡಗ ತಾಪಂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಬೆಂಬಲಿಸಿದ
ಮತದಾರರು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌
ತಿಳಿಸಿದರು. ಶಾಸಕರ ತವರು ಕ್ಷೇತ್ರದಲ್ಲಿ ನಡೆದ ತಾಪಂ ಉಪಚುನಾವಣೆಯಲ್ಲಿ ಉತ್ತಮ ಪೈಪೋಟಿ ನೀಡುವ
ಮೂಲಕ ಕಾರ್ಯಕರ್ತರು ಬಿಜೆಪಿಗೆ ಶಕ್ತಿ ತುಂಬಿದ್ದಾರೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಲಕ್ಷ್ಮಣ, ಜಿಪಂ ಮಾಜಿ ಸದಸ್ಯ ಗುರುಸ್ವಾಮಿ, ಮಲ್ಲಿಕಾರ್ಜುನ, ನಿವೃತ್ತ ಡಿಡಿಪಿಐ ರಂಗಪ್ಪ ಮತ್ತಿತರರು ಇದ್ದರು.

ತಾಪಂನಲ್ಲೂ ಕಾಂಗ್ರೆಸ್‌ ಆಡಳಿತ
ಕಳೆದ ಭಾನುವಾರ ತಂಡಗ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಮತ ಎಣಿಕೆ ಆರಂಭವಾಯಿತು. ವಿದ್ಯುನ್ಮಾನ ಮತಯಂತ್ರವಾಗಿದ್ದರಿಂದ ಬಹುಬೇಗ ಫಲಿತಾಂಶ ಹೊರ ಬಿತ್ತು. ಕಾಂಗ್ರೆಸ್‌ ಈ ಹಿಂದೆ ತನ್ನ ಹಿಡಿತದಲ್ಲಿದ್ದ ತಂಡಗ ಕ್ಷೇತ್ರವನ್ನು ಉಳಿಸಿಕೊಂಡಿದೆ. ಒಟ್ಟು 21 ತಾಪಂ ಕ್ಷೇತ್ರಗಳಿದ್ದು, 14 ಕಾಂಗ್ರೆಸ್‌, 7 ಬಿಜೆಪಿ ಸದಸ್ಯರಿದ್ದಾರೆ. ತಾಪಂನಲ್ಲಿ ಕಾಂಗ್ರೆಸ್‌ ಅಧಿಕಾರ ನಡೆಸುತ್ತಿದೆ.  

Trending videos

Back to Top