CONNECT WITH US  

ಗೋಶಾಲೆ ಸ್ಥಗಿತಕ್ಕೆ ವಿರೋಧ

ಮೊಳಕಾಲ್ಮೂರು: ಹಿರೇಕೆರೆಹಳ್ಳಿ ಗ್ರಾಮದ ಗೋಶಾಲೆಯನ್ನು ಸರ್ಕಾರ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಸೆಂಟರ್‌
ಆಫ್‌ ಟ್ರೇಡ್‌ ಯೂನಿಯನ್ಸ್‌ ನ ತಾಲೂಕು ಘಟಕದ ಕಾರ್ಯಕರ್ತರು ಮತ್ತು ರೈತರು ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಮುಖ್ಯ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಚ್‌.ಎ. ಮಾರಣ್ಣ, ತಾಲೂಕಿನಲ್ಲಿ ಭೀಕರ ಬರದಛಾಯೆ ಆವರಿಸಿ ಜಾನುವಾರುಗಳಿಗೆ ಮೇವು ನೀರಿಲ್ಲದೆ ನಿಶಕ್ತವಾಗಿ ಸಾಯುವ ದುಸ್ಥಿತಿ ನಿರ್ಮಾಣವಾಗಿದೆ ಎಂದರು. ಈಗಾಗಲೇ ಹಿರೇಕೆರೆಹಳ್ಳಿ ಗೋಶಾಲೆಗೆ ಬೊಮ್ಮಲಿಂಗನಹಳ್ಳಿ, ತಳವಾರಹಳ್ಳಿ, ಯರೆನಹಳ್ಳಿ, ಹಿರೇಕೆರೆಹಳ್ಳಿ, ಹೊಸಹಟ್ಟಿ, ಕಾಟನಾಯಕನಹಳ್ಳಿ, ಮೇಗಳಹಟ್ಟಿ ಸೇರಿದಂತೆ ಹಲವಾರು ಗ್ರಾಮಗಳ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಜಾನುವಾರುಗಳು ಆಶ್ರಯ ಪಡೆದಿದ್ದವು ಎಂದು ತಿಳಿಸಿದರು. 

ತಾಲೂಕಿನಲ್ಲಿ ಈವರೆಗೂ ಉತ್ತಮ ಮಳೆಯಾಗಿ ಹುಲ್ಲು ಬೆಳೆದಿಲ್ಲ. ಈಗಿದ್ದರೂ ಸರ್ಕಾರ ಅವೈಜ್ಞಾನಿಕವಾಗಿ ಗೋಶಾಲೆಗಳನ್ನು ಮುಚ್ಚಲು ಆದೇಶ ನೀಡಿರುವುದು ಅಮಾನವೀಯ. ಗೋಶಾಲೆಗಳನ್ನು ಮುಚ್ಚಿರುವುದರಿಂದ ಸಾವಿರಾರು ಜಾನುವಾರುಗಳು ಮೇವು, ನೀರಿಲ್ಲದೆ ಸಾವನ್ನಪ್ಪಲಿವೆ. ಇನ್ನು ಕೆಲವು ಜಾನುವಾರುಗಳನ್ನು ಕಸಾಯಿಖಾನೆಗೆ ತಳ್ಳುವ ಸಾಧ್ಯತೆ ಇರುವುದರಿಂದ ಗೋವುಗಳ ರಕ್ಷಣೆಗಾಗಿ ಹಿರೇಕೆರೆಹಳ್ಳಿ ಸೇರಿದಂತೆ ತಾಲೂಕಿನ ಎಲ್ಲ ಗೋಶಾಲೆಗಳನ್ನು ಮುಚ್ಚದೆ ಮುಂದುವರಿಸಬೇಕು. ಇಲ್ಲದಿದ್ದರೆ ಹೋರಾಟ
ಮಾಡಲಾಗುವುದೆಂದರು.

ಸಿಐಟಿಯು ಉಪಾಧ್ಯಕ್ಷ ದಾನಸೂರ ನಾಯಕ ಮಾತನಾಡಿ, ಸರ್ಕಾರವು ಮೂಕ ಪ್ರಾಣಿಗಳ ಸಂರಕ್ಷಣೆಯಲ್ಲಿ ನಿರ್ಲಕ್ಷ ವಹಿಸಿದೆ ಜಾನುವಾರುಗಳ ಸಂರಕ್ಷಣೆಗೆ ಸ್ಥಗಿತಗೊಳಿಸಿರುವ ಗೋಶಾಲೆಗಳನ್ನು ಮುಂದುವರಿಸಬೇಕು. ಜಾನುವಾರುಗಳಿಗೆ ಮೇವು ನೀರನ್ನು ಕಲ್ಪಿಸಿ ಜಾನುವಾರುಗಳನ್ನು ಸಂರಕ್ಷಿಸಬೇಕು. ತಾಲೂಕಿನ ವಾಸ್ತವ ಪರಿಸ್ಥಿತಿ ಅವಲೋಕಿಸಿ ಗೋಶಾಲೆಗಳನ್ನು  ಮುಂದುವರಿಸಬೇಕು ಎಂದು ಒತ್ತಾಯಿಸಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರು ತಹಶೀಲ್ದಾರ್‌ ಜಿ. ಕೊಟ್ರೇಶ್‌ ಅವರಿಗೆ ಮನವಿ ಸಲ್ಲಿಸಿದರು. 

ಗ್ರಾಪಂ ಸದಸ್ಯ ತಿಪ್ಪೇರುದ್ರಪ್ಪ, ರೈತರಾದ ರಾಜಣ್ಣ, ಟಿಪ್ಪುಸುಲ್ತಾನ್‌, ರಾಮಾಂಜನೇಯ,ನಾಗರಾಜ್‌, ಸಿದ್ದಪ್ಪ, ಶಿವಮೂರ್ತಿ, ಸಣ್ಣಪ್ಪಜ್ಜ, ಮಲ್ಲಯ್ಯ, ಸಿಐಟಿಯು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  


Trending videos

Back to Top