CONNECT WITH US  

ಅಂತರ್ಜಲ ವೃದ್ಧಿಗೆ ಜಾಗೃತಿ ಕಾರ್ಯಕ್ರಮ

ಚಿತ್ರದುರ್ಗ: ಜಿಲ್ಲಾದ್ಯಂತ ಅಂತರ್ಜಲ ಮಟ್ಟ ವೃದ್ಧಿಸಲು ಜಲತಜ್ಞರೊಟ್ಟಿಗೆ ಜಲ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಮುರುಘಾ ಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಜಲತಜ್ಞ ರಾಜೇಂದ್ರ ಸಿಂಗ್‌ ಅವರೊಂದಿಗೆ ಜಿಲ್ಲೆಯ ಬರ ಹಾಗೂ ನೀರು ನಿರ್ವಹಣೆ ಕುರಿತು ಚರ್ಚಿಸಿ ಅವರು ಮಾತನಾಡಿದರು.

ಆರಂಭದಲ್ಲಿ ಭೀಕರ ಬರಕ್ಕೆ ತುತ್ತಾದ ಗ್ರಾಮವೊಂದನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ರಾಜೇಂದ್ರ ಸಿಂಗ್‌ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅವರೊಟ್ಟಿಗೆ ನೀರಿನ ವಿಚಾರವಾಗಿ ಚರ್ಚಿಸಿದ್ದು, ಅಭಿಯಾನದ ಅವಶ್ಯಕತೆ ಕಾಣುತ್ತಿದೆ.

ಆದ್ದರಿಂದ ರಾಜೇಂದ್ರ ಸಿಂಗ್‌ ಸಲಹೆ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಮಠದಲ್ಲಿ ಸಭೆ ಕರೆದು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಇತ್ತೀಚಿನ ದಶಕಗಳಲ್ಲಿ ಜಿಲ್ಲೆಯ ಜಲಮೂಲ ಬತ್ತಿ ಹೋಗಿ ಆತಂಕ ಸೃಷ್ಟಿಸಿದೆ. ಮಳೆ ಪ್ರಮಾಣ ಹಾಗೂ ವಾತಾವರಣದ
ಬದಲಾವಣೆ ಏರುಗತಿಯಲ್ಲಿ ಸಾಗಿದೆ. ಜಿಲ್ಲೆಯನ್ನು ಬರದ ದವಡೆಯಿಂದ ಪಾರು ಮಾಡಲು ಯಾವ ರೀತಿ ಕೆಲಸ
ಮಾಡಬೇಕೆಂಬ ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಜಲತಜ್ಞ ರಾಜೇಂದ್ರ ಸಿಂಗ್‌, ನೀರಿನ ಸಾಕ್ಷರತೆ ಮೂಡಿಸಲು
ಮುರುಘಾ ಶರಣರು ಮುಂದಾಗಿದ್ದಾರೆ. ಜಿಲ್ಲೆಯ ಬರ ಪರಿಸ್ಥಿತಿ ನೋಡಿದ ಮೇಲೆ ಅವರ ಜತೆ ನಾನು ಕೈಜೋಡಿಸಿ ಸಂಪೂರ್ಣ ಬೆಂಬಲ ನೀಡುತ್ತೇನೆ. ಶ್ರೀಮಠದ ವಿದ್ಯಾಸಂಸ್ಥೆಗಳು, ಭಕ್ತರು ಒಂದೆಡೆ ಸೇರಿದರೆ ಜಲ ಕ್ರಾಂತಿಯೇ ನಡೆಯುತ್ತದೆ. ಪ್ರತಿಯೊಬ್ಬರಿಗೂ ಜಲ ಸಾಕ್ಷರತೆ ಅವಶ್ಯವಾಗಿದೆ. ಹನಿ ನೀರಿನ ಮಹತ್ವ ತಿಳಿಯದ ಹೊರತು
ನಮ್ಮ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ ಎಂದರು.

ಇಸ್ರೇಲ್‌ ಮಾದರಿ ಅಳವಡಿಕೆ ಅಗತ್ಯ: ಅತ್ಯಂತ ಕಡಿಮೆ ಮಳೆ ಬೀಳುವ ಚಿತ್ರದುರ್ಗ ಜಿಲ್ಲೆಯಲ್ಲಿ ನೀರು ನಿರ್ವಹಣೆ,
ಬೆಳೆ ಪದ್ಧತಿಗೆ ತುರ್ತಾಗಿ ಇಸ್ರೇಲ್‌ ಮಾದರಿ ಅಳವಡಿಕೆ ಮಾಡಿಕೊಳ್ಳಬೇಕು. ಬೀಳುವ ಮಳೆಯ ಪ್ರಮಾಣ,
ಭೂಮಿ ಫಲವತ್ತತೆ, ಉಷ್ಣಾಂಶದಲ್ಲಿ ಏರಿಳಿತಕ್ಕೆ ತಕ್ಕಂತೆ ಬೆಳೆ ಪದ್ಧತಿಯಲ್ಲಿ ನಾವು ಸುಧಾರಣೆ ಹೊಂದಬೇಕಿದೆ. ಅಂತರ್ಜಲ ಕಾಯ್ದುಕೊಳ್ಳುವುದಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು.

ನೀರಿನ ಶಿಸ್ತುಬದ್ಧ ಬಳಕೆ ಜತೆ ಜಿಲ್ಲೆಯ ಕೆರೆ-ಕಟ್ಟೆಗಳನ್ನು ಜೀವಂತವಾಗಿಡುವುದರೊಂದಿಗೆ ಅಂತರ್ಜಲ ಸಂಗ್ರಹಕ್ಕೆ
ಹೆಚ್ಚು ಮಹತ್ವ ನೀಡಬೇಕು. ಮಳೆಗಾಲದಲ್ಲಿ ಬಿದ್ದ ಹನಿ ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆ ರೂಪಿಸಬೇಕಿದೆ
ಎಂದು ತಿಳಿಸಿದರು.

ಗುಡ್ಡಗಾಡುಗಳಲ್ಲಿ ಹರಿಯುವ ನೀರನ್ನು ಒಂದೆಡೆ ಹರಿಸುವ ಪ್ರಯತ್ನವಾಗಬೇಕು. ನಂತರ ಆ ನೀರನ್ನು
ತಡೆದು ಸದ್ಬಳಕೆಗೆ ಮುಂದಾಗಬೇಕು. ನೀರು ವ್ಯರ್ಥವಾಗಿ ಹರಿಯದಂತೆ ತಡೆಗಟ್ಟಿ ಭೂಮಿಯಲ್ಲಿ ಇಂಗಿಸಬೇಕು.

ನೀರಿನ ಮಹತ್ವ ಸಾರಲು ಬರವೇ ಪಾಠ ಕಲಿಸುತ್ತದೆ. ಮನೆ, ಜಮೀನು, ಅಂಗಳ ಸೇರಿ ಎಲ್ಲಿಯೇ ಬೀಳುವ ಮಳೆ ಹನಿ
ವ್ಯರ್ಥವಾಗದಂತೆ ನೋಡಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದರು.

ಚಿತ್ರದುರ್ಗದ ಪಾರಂಪರಿಕ ಜಲ ಸಂರಕ್ಷಣಾ ತಾಣಗಳಾದ ಚಂದ್ರವಳ್ಳಿ, ಸಿಹಿನೀರು ಹೊಂಡ, ಸಂತೆಹೊಂಡ ಮೊದಲಾದ ಸ್ಥಳಗಳಿಗೆ ಸೆ. 26ರ ಬೆಳಗ್ಗೆ 7 ಗಂಟೆಗೆ ಜಲತಜ್ಞ ರಾಜೇಂದ್ರ ಸಿಂಗ್‌ ಭೇಟಿ ನೀಡಲಿದ್ದಾರೆ


Trending videos

Back to Top