CONNECT WITH US  

ರಾಜಕೀಯ ಗಿಮಿಕ್‌ಗೆ ಹಸಿರು ಶಾಲಿನ ದುರ್ಬಳಕೆ ನಿಲ್ಲಿಸಿ

ಚಿತ್ರದುರ್ಗ: ರಾಜಕೀಯ ಗಿಮಿಕ್‌ಗಾಗಿ ಹೆಗಲ ಮೇಲೆ ಹಸಿರು ಶಾಲು ಹಾಕಿದರೆ ಸಹಿಸುವುದಿಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಗುಡುಗಿದರು. ಇಲ್ಲಿನ ಪ್ರವಾಸಿಮಂದಿರದಲ್ಲಿ ನಡೆದ ಅಖಂಡ ಕರ್ನಾಟಕ ರೈತ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಂದು ದಿನವೂ ಹೊಲದಲ್ಲಿ ಉಳುಮೆ ಮಾಡಲಿಲ್ಲ,ಬಿತ್ತಲಿಲ್ಲ,ಬೆಳೆಯಲಿಲ್ಲ. ಆದರೂ ರೈತರ ಸೋಗಿನಲ್ಲಿ ನಾಟಕ ಮಾಡಲಾಗುತ್ತಿದೆ. ಸಂದರ್ಭಕ್ಕೆ ತಕ್ಕಂತೆ ಹೆಗಲ ಮೇಲೆ ಹಸಿರು ಶಾಲು ಹಾಕೋದನ್ನು ನಿಲ್ಲಿಸಿ ಎಂದು ರಾಜಕೀಯ ಪಕ್ಷಗಳ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ನೇಗಿಲು ಹಿಡಿಯುವುದು ಹೇಗೆ ಎಂಬುದು ಮೊದಲೇ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ರೈತರ ಮತಗಳನ್ನು
ಪಡೆಯಲು ಹೆಗಲ ಮೇಲೆ ಹಸಿರು ಟವೆಲ್‌ ಹಾಕಿ ರಾಜಕೀಯ ಪಕ್ಷಗಳ ನಾಯಕರು ರಾಜಕೀಯ ಗಿಮಿಕ್‌ ಮಾಡಿದರೆ
ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಎಚ್‌.ಡಿ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳು ಕಳೆದಿದೆ. ಆದರೆ ಇನ್ನೂ ರೈತರ ಸಾಲ ಮನ್ನಾ ಆಗಿಲ್ಲ. ಯಾವುದೇ ಜಾತಿ ಭೇದವಿಲ್ಲದೆ, ಸಣ್ಣ ರೈತ, ದೊಡ್ಡ ರೈತ ಎಂದು ತಾರತಮ್ಯ ಮಾಡದೆ ಸಮಾನವಾಗಿ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರೇವಣ್ಣರನ್ನು ಸಂಪುಟದಿಂದ ಕೈಬಿಡಲಿ: ಸರ್ಕಾರ ಮತ್ತು ದೇವೇಗೌಡರ ಕುಟುಂಬದ ಮರ್ಯಾದೆ ಉಳಿಯಬೇಕಾದರೆ
ಸಚಿವ ಎಚ್‌.ಡಿ. ರೇವಣ್ಣ ಅವರನ್ನು ಸಂಪುಟದಿಂದ ಕೈಬಿಡಬೇಕು. ವಿಧಾನಸೌಧದಲ್ಲಿ 314ನೇ ಕೊಠಡಿಯೇ
ಬೇಕು, ಕೇಳಿದ ಖಾತೆಯನ್ನೇ ಕೊಡಬೇಕು ಎಂದು  ಹಠಹಿಡಿಯುವುದಾದರೆ ಜನಸೇವೆ ಮಾಡುವ ಮನಸ್ಸಾದರೂ
ಎಲ್ಲಿಂದ ಬರಬೇಕು ಎಂದು ಖಾರವಾಗಿ ಪ್ರಶ್ನಿಸಿದರು. ಮಾಜಿ ಪ್ರಧಾನಿ ದೇವೇಗೌಡರ ಪುತ್ರ, ಮುಖ್ಯಮಂತ್ರಿ
ಕುಮಾರಸ್ವಾಮಿ ಸಹೋದರ ಎನ್ನುವ ಒಂದೇ ಕಾರಣ ಕ್ಕೆ ಎಚ್‌.ಡಿ. ರೇವಣ್ಣ ಎಲ್ಲ ವಿಷಯಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಪ್ರಧಾನಿ ಮೋದಿ ಭರವಸೆ ಹುಸಿ: ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ನಾಲ್ಕು ವರ್ಷಗಳನ್ನು ಪೂರೈಸಿದ್ದಾರೆ.
ಚುನಾವಣೆಗೆ ಮುನ್ನ ದೇಶದ ಜನತೆಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ವಿದೇಶದಲ್ಲಿರುವ ಕಪ್ಪುಹಣ
ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಜನರ ಮೂಗಿಗೆ ತುಪ್ಪ ಸವರಿದ್ದಾರೆ. ತೈಲ ಬೆಲೆಗಳು, ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದ್ದು ದೇಶದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಿಡಿ ಕಾರಿದರು.

ಭಾರತವನ್ನು ಡಿಜಿಟಲ್‌ ಇಂಡಿಯಾ ಮಾಡುತ್ತೇನೆ, ಯುವಕರಿಗೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದೆಲ್ಲ ಹೇಳಿದ್ದ ಪ್ರಧಾನಿ ಮೋದಿಯವರಿಗೆ ಉದ್ಯೋಗ ಎಂದರೇನು ಎಂಬುದೇ ಗೊತ್ತಿಲ್ಲ. ಜನಸಾಮಾನ್ಯರಿಗೆ   ಸರ್ಕಾರ ಕೊಡುವ ಉದ್ಯೋಗಕ್ಕಿಂತ ನೂರು ಪಟ್ಟು ಹೆಚ್ಚಿನ ಉದ್ಯೋಗವನ್ನು ದೇಶದ ರೈತರು ಕಾರ್ಮಿಕರಿಗೆ ಕೊಡುತ್ತಿದ್ದಾರೆ. ರೈತರೇ ಸರ್ಕಾರ ಇದ್ದಂತೆ. ಆದರೆ ಇದುವರೆಗೆ ಆಳಿದ ಯಾವ ಸರ್ಕಾರಗಳಿಂದ ಯಾವುದೇ ಉಪಯೋಗ ರೈತರಿಗೆ ಆಗಿಲ್ಲ ಎಂದು ಆರೋಪಿಸಿದರು.

ಒಂದು ಲಕ್ಷ ಹದಿನಾಲ್ಕು ಸಾವಿರ ಕೋಟಿ ರೂ. ಗಳಷ್ಟು ಉದ್ಯಮಿಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ.
ಅದನ್ನು ಡೆಡ್‌ ಲೋನ್‌ ಎಂದು ಪರಿಗಣಿಸಿ ಬ್ಯಾಂಕ್‌ ಲೆಕ್ಕದ ಹಾಳೆಯನ್ನೇ ಕಿತ್ತು ಹಾಕಿದೆ. ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ 13 ಸಾವಿರ ಕೋಟಿ ರೂ. ನಷ್ಟದಲ್ಲಿದೆ. ಆದರೆ ರೈತರ ಸಾಲ ಮನ್ನಾ ಮಾಡಲು ಮಾತ್ರ ಮನಸ್ಸು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕುರುಬರಹಳ್ಳಿ ಶಿವಣ್ಣ, ತಾಲೂಕು ಅಧ್ಯಕ್ಷ ಎಸ್‌. ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಗಿರೀಶ್‌ ರೆಡ್ಡಿ, ಭೀಮರೆಡ್ಡಿ, ಎಸ್‌. ಮುರುಗೇಶ್‌, ಕುಬೇರಮ್ಮ, ನಂಜುಂಡಪ್ಪ ಭಾಗವಹಿಸಿದ್ದರು. 

Trending videos

Back to Top