CONNECT WITH US  

ಮಾಸಿಕ ವೇತನ ಹೆಚ್ಚಳಕ್ಕೆ ಆಗ್ರಹ

ಚಿತ್ರದುರ್ಗ: ಕನಿಷ್ಠ ವೇತನ ಮಾಸಿಕ 10,500 ರೂ. ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ದಾವಣಗೆರೆ ರಸ್ತೆಯ ಕಮ್ಯುನಿಸ್ಟ್‌ ಪಕ್ಷದಕಾರ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧಧಿಕ್ಕಾರ ಕೂಗಿದರು.

ಕಳೆದ 16 ವರ್ಷಗಳಿಂದ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಂದು ಲಕ್ಷದ ಹದಿನೆಂಟು ಸಾವಿರ ಮಹಿಳೆಯರು ಅಡುಗೆ ತಯಾರಕರು ಹಾಗೂ ಸಹಾಯಕರಾಗಿ ಯಾವುದೇ ಜೀವನ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಮುಖ್ಯ ಅಡುಗೆಯವರಿಗೆ ತಿಂಗಳಿಗೆ 2700 ರೂ. ಹಾಗೂ ಸಹಾಯಕಿಯರಿಗೆ 2600 ರೂ.ಗಳ ಗೌರವ ಸಂಭಾವನೆ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅದಕ್ಕಾಗಿ ತಿಂಗಳಿಗೆ 10,500 ರೂ.ಗಳ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಎಐಟಿಯುಸಿ, ಬಿಸಿಯೂಟ ತಯಾರಕರ ಫೆಡರೇಷನ್‌ನ ರಾಜ್ಯ ಸಮಿತಿ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತಾಗಿ ಸಭೆ ಕರೆದು ಬಿಸಿಯೂಟ ತಯಾರಕರ ಹಾಗೂ ಸಹಾಯಕಿಯರ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ನಿವೃತ್ತಿ ಹೊಂದಿದ ಎಲ್ಲ ಬಿಸಿಯೂಟ ತಯಾರಕರಿಗೆ ಮಾಸಿಕ ಮೂರು ಸಾವಿರ ರೂ. ಪಿಂಚಣಿ ನೀಡಬೇಕು. ಬಿಸಿಯೂಟ ತಯಾರಕರು ಆಕಸ್ಮಿಕವಾಗಿ ನಿಧನ ಹೊಂದಿದಲ್ಲಿ ಅವರ ಕುಟುಂಬಕ್ಕೆ ವರ್ಗಕ್ಕೆ ಎರಡು ಲಕ್ಷ ರೂ.ಗಳ ಪರಿಹಾರ ಹಾಗೂ ಅಂತ್ಯಸಂಸ್ಕಾರಕ್ಕೆ ಇಪ್ಪತ್ತು ಸಾವಿರ ರೂ.ಗಳ ನೆರವು ನೀಡಬೇಕು. ಪ್ರತಿ ವರ್ಷ ಒಂದು ಜೊತೆ ಸಮವಸ್ತ್ರ, ಸೀರೆ ಮತ್ತು ಒಂದು ಜೊತೆ ಏಪ್ರಾನ್‌ ವಿತರಿಸಬೇಕು. 

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸ್ವಯಂಸೇವಾ ಸಂಸ್ಥೆಗಳಿಗೆ ನೀಡಿರುವ ಗುತ್ತಿಗೆ ರದ್ದುಪಡಿಸಿ ಸರ್ಕಾರದ ಕೈಪಿಡಿಯಲ್ಲಿರುವಂತೆ ಆಯಾ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಬಡಿಸಬೇಕು. ದಸರಾ ರಜೆ ಮತ್ತು ಬೇಸಿಗೆ ರಜೆಯ ಸಂಬಳ ಕಡಿತಗೊಳಿಸದೆ ಪಾವತಿಸಬೇಕು. ಹತ್ತು ದಿನಗಳ ರಜಾವನ್ನು 20 ದಿನಗಳಿಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು. 

ಎಐಟಿಯುಸಿ ಜಿಲ್ಲಾಧ್ಯಕ್ಷ ಬಿ. ಬಸವರಾಜಪ್ಪ, ರಾಜ್ಯ ಮಂಡಳಿ ಸದಸ್ಯ ಟಿ.ಆರ್‌. ಉಮಾಪತಿ, ಸಂಘಟನಾ ಕಾರ್ಯದರ್ಶಿ ಕೆ.ಇ. ಸತ್ಯಕೀರ್ತಿ, ಕಾರ್ಯದರ್ಶಿ ಗಣೇಶ್‌, ಗಿರಿಜಮ್ಮ, ಸುವರ್ಣಮ್ಮ, ರಜಿಯಾ, ಪರ್ವಿನ್‌ಭಾನು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಮಿಳನಾಡು ಮಾದರಿಯಲ್ಲಿ ಬಿಸಿಯೂಟ ತಯಾರಕರಿಗೆ ಸವಲತ್ತುಗಳನ್ನು ನೀಡಿ ಜೀವನಕ್ಕೆ ಭದ್ರತೆ ಒದಗಿಸಬೇಕು.
ಪಿಎಫ್‌, ಇಎಸ್‌ಐ ಜಾರಿಗೊಳಿಸಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ನೆಪ ಮಾಡಿಕೊಂಡು ಬಿಸಿಯೂಟ ತಯಾರಕರನ್ನು ಕೆಲಸದಿಂದ ತೆಗೆದುಹಾಕಬಾರದು.

60 ವರ್ಷವಾಗಿರುವ ಬಿಸಿಯೂಟ ತಯಾರಕರನ್ನು ಕೆಲಸದಿಂದ ಬಿಡುಗಡೆಗೊಳಿಸಿದಾಗ ಎರಡು ಲಕ್ಷ ರೂ.ಗಳ ಇಡಿಗಂಟು ನೀಡಬೇಕು. 
ಜಿ.ಸಿ. ಸುರೇಶ್‌ಬಾಬು, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ

Trending videos

Back to Top