CONNECT WITH US  

ಶುಭ ಕಾರ್ಯಕ್ಕಿಲ್ಲ ಆಷಾಢದ ಅಡ್ಡಿ: ಮುರುಘಾ ಶ್ರೀ

ಚಿತ್ರದುರ್ಗ: ಆಷಾಢ ಮಾಸದಲ್ಲಿ ಯಾವುದೇ ಕಾರ್ಯ ಮಾಡಿದರೆ ಒಳ್ಳೆಯದಾಗುವುದಿಲ್ಲ ಎಂಬ ಮೂಢನಂಬಿಕೆ ಸಮಾಜದಲ್ಲಿದೆ. ಇದರಿಂದ ಎಲ್ಲ ಕಲ್ಯಾಣಮಂಟಪಗಳು ಬಿಕೋ ಎನ್ನುತ್ತಿವೆ. ಆದರೆ ಮುರುಘಾಮಠ ಕಳೆದ 28 ವರ್ಷಗಳಿಂದ ಆಷಾಢ ಮಾಸದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಆಯೋಜಿಸುತ್ತ ಬಂದಿದೆ. ಇಲ್ಲಿ ಮದುವೆಯಾದವರಿಗೆ ಏನೂ ತೊಂದರೆಗಳಾದ ನಿದರ್ಶನಗಳಿಲ್ಲ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. 

ಇಲ್ಲಿನ ಮುರುಘಾ ಮಠದ ಬಸವ ಕೇಂದ್ರ ಮತ್ತು ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ವತಿಯಿಂದ ಭಾನುವಾರ ಆಯೋಜಿಸಿದ್ದ 28ನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶರಣರು ಮಾತನಾಡಿದರು.
 
ಕೆಲವೊಮ್ಮೆ ಎಲ್ಲ ಶಾಸ್ತ್ರ, ಸಂಪ್ರದಾಯ ಪಾಲಿಸಿ ಮದುವೆ ಮಾಡಿದವರಿಗೆ ತೊಂದರೆಗಳಾಗಿವೆ. ಆದರೆ ಇಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಪಂಚಾಂಗದ ಮೂಲಕ ಮುಗ್ಧರಿಗೆ ಮೋಸ ಮಾಡಬಾರದು. ಆಷಾಢ ಮಾಸದಲ್ಲಿ ನಮ್ಮಲ್ಲಿ ಮದುವೆ ಆಗುತ್ತವೆ ಎಂಬುದಕ್ಕೆ ಇಂದಿನ 11 ಜೋಡಿಗಳ ಮದುವೆಗಳೇ ಸಾಕ್ಷಿ. ಈಗಾಗಲೇ 15 ಸಾವಿರಕ್ಕೂ ಹೆಚ್ಚು ಮದುವೆಗಳು ಆಗಿವೆ. ಶಿವಯೋಗ ಅಥವಾ ಧ್ಯಾನ ಮಾಡಿದವರಿಗೆ ದರಿದ್ರತನ ಬರುವುದಿಲ್ಲ. ಕಾಯಕವೇ ಕೈಲಾಸ ಎಂದವರಿಗೆ ಬಡತನ ಇರುವುದಿಲ್ಲ. ಕಾಯಕ ಮಾಡಿದವರಿಗೆ ಧನಾಗಮವಾಗುತ್ತದೆ. ಆದ್ದರಿಂದ ಕಾಯಕದಲ್ಲಿ ಕೈಲಾಸ ಕಾಣುವ ಪ್ರಯತ್ನ ಮಾಡಬೇಕು ಎಂದರು.
 
ಬೆಳಗಾವಿ ಜಿಲ್ಲೆ ಜನವಾಡದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಹಳ ಮಂದಿ ಮುರುಘಾಮಠದಲ್ಲಿ ಮದುವೆ ಆಗುತ್ತಿದ್ದಾರೆ ಎಂದರೆ ಬರಿಗೈಯಲ್ಲಿ ಬಂದು ಹೋಗುತ್ತಾರೆ. ಏಕೆಂದರೆ ಇಲ್ಲಿ ಎಲ್ಲ ರೀತಿಯ ಅನುಕೂಲತೆಗಳು ಇವೆ. ಗಂಡ ಹೆಂಡಿರ ಮನಸ್ಸು ಒಂದಾದರೆ ದೇವರ ಮುಂದಿರುವ ನಂದಾದೀಪ ಎಂದು ಹೇಳುತ್ತಾರೆ. ಮದುವೆ ಸಂಬಂಧಗಳು ಬೇರೆ, ಇತರೆ ಸಂಬಂಧಗಳೇ ಬೇರೆ. ಪ್ರೀತಿ ಸಿಗುವ ಮನಸ್ಸು ನಮಗೆ ಬೇಕು ಎಂದರು.

ನಗರಸಭೆ ಅಧ್ಯಕ್ಷ ಎಚ್‌. ತಿಮ್ಮಣ್ಣ ಮಾತನಾಡಿ, ಬೇರೆ ಕಡೆ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆದರೂ ಪ್ರತಿ ತಿಂಗಳು ತಪ್ಪದೇ ನಡೆಯುವುದು ಮುರುಘಾಮಠದಲ್ಲಿ ಮಾತ್ರ. ಈ ಕಾರ್ಯಕ್ರಮದಿಂದ ಬಡವರು, ದೀನ ದಲಿತರು,
ಹಿಂದುಳಿದವರು ದುಂದುವೆಚ್ಚಗಳಿಲ್ಲದೆ ಸರಳವಾಗಿ ವಿವಾಹ ಮಾಡಿಕೊಳ್ಳಲು ತುಂಬ ಸಹಕಾರಿಯಾಗಿದೆ ಎಂದರು.
 
ದಾವಣಗೆರೆಯ ಉದ್ಯಮಿ ಆನಂದ್‌, ಚಿತ್ರದುರ್ಗ ಕಣಿವೆ ಮಾರಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ ಮಾತನಾಡಿದರು. ಕಲ್ಯಾಣ ಮಹೋತ್ಸವದಲ್ಲಿ 11 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಕಾಶ್‌ ಹಾಗೂ ಬಸವರಾಜ ಪಾಟೀಲ್‌ ವಧು-ವರರಿಗೆ ತಾಳಿ ನೀಡಿದರು. ಕೆಇಬಿ ಷಣ್ಮುಖಪ್ಪ ವಧುವರರಿಗೆ ಬಟ್ಟೆ ವಿತರಿಸಿದರು. 

ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಶಿರಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಳ್ಳಕೆರೆಯ ಶ್ರೀ ಬಸವಕಿರಣ ಸ್ವಾಮೀಜಿ, ಹೊಳಲ್ಕೆರೆಯ ಶ್ರೀ ಪ್ರಜ್ಞಾನಂದ ಸ್ವಾಮೀಜಿ, ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಪೈಲ್ವಾನ್‌ ತಿಪ್ಪೇಸ್ವಾಮಿ ಇದ್ದರು. ಜಮುರಾ ಕಲಾವಿದರು ವಚನ ಗೀತೆ ಪ್ರಾರ್ಥಿಸಿದರು. ವಚನ ಕಮ್ಮಟ ವಿಭಾಗದ ನಿರ್ದೇಶಕ ಪ್ರೊ| ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಪ್ರದೀಪಕುಮಾರ್‌ ನಿರೂಪಿಸಿದರು.

ಇಂದು ಬಹಳಷ್ಟು ಜನರು ಭೌತಿಕ ಸುಖ ಕಾಣುತ್ತಾರೆ. ಆದರೆ ಆಂತರಿಕ ಸೌಂದರ್ಯದ ಬದುಕನ್ನು ನೋಡಬೇಕು. ಸತಿ ಪತಿಗಳು ಒಂದಾಗದ ಭಕ್ತಿ ಅಮೃತದೊಳಗೆ ವಿಷ ಬೆರೆಸಿದಂತೆ. ಗಂಡ ಹೆಂಡಿರ ಬದುಕು ವಿಷದಂತೆ ಸಾಯಲು
ಆಗದೆ ಅಮೃತದಂತೆ ಬದುಕಲು ಆಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಹಣ, ಆಸ್ತಿಗಿಂತಲೂ ದಂಪತಿಗಳು ಒಬ್ಬರನ್ನೊಬ್ಬರು ಅರಿತು ಬದುಕು ಸಾಗಿಸಬೇಕು.
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಜನವಾಡ ಮಠ.


Trending videos

Back to Top