CONNECT WITH US  

ಪುಟ್‌ಪಾತ್‌ ಅಂಗಡಿಗಳ ತೆರವಿಗೆ ಸೂಚನೆ

ಚಳ್ಳಕೆರೆ: ನಗರದಲ್ಲಿ 2.75 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಈಗಿರುವ ಖಾಸಗಿ ಬಸ್‌ ನಿಲ್ದಾಣವನ್ನು ನೆಲಸಮಗೊಳಿಸಿ ಅದೇ ಜಾಗದಲ್ಲಿ ಅತ್ಯಾಧುನಿಕ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ತಹಶೀಲ್ದಾರ್‌ ಟಿ.ಸಿ. ಕಾಂತರಾಜ್‌, ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು, ಪಿಎಸ್‌ಐ ಕೆ. ಸತೀಶ್‌ ನಾಯ್ಕ, ಜೆಇ ಲೋಕೇಶ್‌, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ ಮತ್ತಿತರ ಅಧಿಕಾರಿಗಳು ಪುಟ್‌ಪಾತ್‌ ಅಂಗಡಿಗಳನ್ನು ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಸೋಮವಾರ ಸಂಜೆಯೊಳಗೆ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಬೇಕು. ನೂತನ ಬಸ್‌ ನಿಲ್ದಾಣ ಕಾಮಗಾರಿಗೆ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.

ಖಾಸಗಿ ಬಸ್‌ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್‌, ಹೂವಿನ ಅಂಗಡಿ, ಹಣ್ಣಿನ ಅಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ನಮಗೆ ಯಾವುದೇ ಮಾಹಿತಿ ನೀಡದೆ ತೆರವುಗೊಳಿಸುವಂತೆ ಏಕಾಏಕಿ ಸೂಚನೆ ನೀಡುತ್ತಿರುವುದು ಸರಿಯಲ್ಲ. ಪರ್ಯಾಯ ವ್ಯವಸ್ಥೆ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿಲ್ಲ. ನೂರಾರು ಬಡ ಕುಟುಂಬಗಳು ಪುಟ್‌ಪಾತ್‌ ವ್ಯಾಪಾರವನ್ನೇ ನಂಬಿ ಬದುಕುತ್ತಿವೆ. ಈಗ ನಮ್ಮ ವ್ಯಾಪಾರವನ್ನು ತಡೆದರೆ ಜೀವನದ ಗತಿ ಏನು ಎಂದು ಖಾರವಾಗಿ ಪ್ರಶ್ನಿಸಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಜೆ.ಟಿ. ಹನುಮಂತರಾಜು, ನಗರದ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಬಸ್‌ ನಿಲ್ದಾಣ ಕಾಮಗಾರಿ ಆರಂಭವಾದಲ್ಲಿ ಧೂಳು, ಬಿಸಿಲಿನಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಲಿದೆ. ಈಗಾಗಲೇ ಕಾಮಗಾರಿ ತಡವಾಗಿದ್ದು, ಎಲ್ಲರೂ ಸೇರಿ ಅವಕಾಶ ಮಾಡಿಕೊಟ್ಟಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು.

ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಯಾವುದೇ ಕಾರಣಕ್ಕೂ ಈಗಿರುವ ಜಾಗವನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಳೆದ 30-40 ವರ್ಷಗಳಿಂದ ಇದೇ ಜಾಗದಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಆದ್ದರಿಂದ ನಮಗೆ ಇಲ್ಲಿಯೇ ಮುಂದುವರೆಯಲು ಅವಕಾಶ ನೀಡಿ ಎಂದು ಪುಟ್‌ಪಾತ್‌ ವ್ಯಾಪಾರಸ್ಥರು ಕೋರಿದರು. 

ಇದಕ್ಕೆ ಒಪ್ಪದ ಪೌರಾಯುಕ್ತರು, ರಾಜ್ಯ ಪೌರಾಡಳಿತ ಇಲಾಖೆ ನಿರ್ದೇಶನಾಲಯ ಕಾಮಗಾರಿ ಟೆಂಡರ್‌ಗೆ ಅನುಮೋದನೆ ನೀಡಿದೆ. ಗುತ್ತಿಗೆದಾರರು ಎಲ್ಲಾ ದಾಖಲಾತಿ ನೀಡಿ ನಿಬಂಧನೆಗಳನ್ನು ಪೂರೈಸಿದ್ದಾರೆ. ನಗರಸಭೆಯಿಂದ
ಅಂಗಡಿಗಳನ್ನು ತೆರವುಗೊಳಿಸಿಕೊಟ್ಟಲ್ಲಿ ಮಾತ್ರ ಅವರು ಕಾಮಗಾರಿ ಕೈಗೆತ್ತಿಗೊಳ್ಳಲು ಸಾಧ್ಯ. ಇಲಾಖೆಯ ನಿರ್ದೇಶನದಂತೆ ತೆರವುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಸ್ತುತ ಎಲ್ಲಾ ಜಾಗ ನಗರಸಭೆ ಅಧೀನದಲ್ಲಿದ್ದು ತೆರವು ಕಾರ್ಯ ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.

Trending videos

Back to Top