CONNECT WITH US  

ನಾಯಕನಹಟ್ಟಿಯಲ್ಲಿ ಪ್ರಥಮ ಮಹಿಳಾ ಸಮ್ಮೇಳನ

ನಾಯಕನಹಟ್ಟಿ: ಸಮ್ಮೇಳನಗಳು ಸಾಂಸ್ಕೃತಿಕ ಶ್ರೀಮಂತಿಕೆಯ ಹಬ್ಬಗಳಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ದೊಡ್ಡಮಲ್ಲಯ್ಯ ಹೇಳಿದರು. ಇಲ್ಲಿನ ಪಟ್ಟಣ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಹಿಳಾ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲೇ ಪ್ರಥಮ ಬಾರಿ ನಾಯಕನಹಟ್ಟಿ ಪಟ್ಟಣದಲ್ಲಿ ಜಿಲ್ಲಾ ಮಹಿಳಾ ಸಮ್ಮೇಳನ ಏರ್ಪಡಿಸಲು ನಿರ್ಧರಿಸಲಾಗಿದೆ. ಕಸಾಪ ವತಿಯಿಂದ ಪ್ರತಿ ವರ್ಷ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಇದರ ಜೊತೆಗೆ ಮಹಿಳೆ ಹಾಗೂ ಮಕ್ಕಳ ಜಿಲ್ಲಾ ಸಮ್ಮೇಳನಗಳನ್ನೂ ಆಯೋಜಿಸಬೇಕು ಎನ್ನುವುದು ಪರಿಷತ್ತಿನ ಆಶಯವಾಗಿದೆ ಎಂದರು.

ಹೊಳಲ್ಕೆರೆ ಹಾಗೂ ಚಿತ್ರದುರ್ಗದಲ್ಲಿ ಎರಡು ಜಿಲ್ಲಾ ಸಮ್ಮೇಳನಗಳನ್ನು ನಡೆಸಲಾಗಿದೆ. ಚಿತ್ರದುರ್ಗದ ಜಿಲ್ಲಾ ಸಮ್ಮೇಳನ ಗೋಷ್ಠಿಗಳ ವಿಚಾರದಲ್ಲಿ ಅತ್ಯಂತ ವಿಶೇಷವಾಗಿತ್ತು. ಸರಳ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಆದರೆ ಊಟದ ವಿಷಯದಲ್ಲಿ ಮೊದಲ ದಿನ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ಉಂಟಾಗಿತ್ತು. ಎರಡನೇ ದಿನ ಸಮಸ್ಯೆಯನ್ನು ಸರಿಪಡಿಸಲಾಯಿತು. ಚಿತ್ರದುರ್ಗ ಸಮ್ಮೇಳನಾಧ್ಯಕ್ಷ ಬಂಜಗೆರೆ ಜಯಪ್ರಕಾಶ್‌ ಇಲ್ಲಿನ ಪ್ರದೇಶದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಸ್ಥಳೀಯ ಅವಧೂತ ಪರಂಪರೆ ಹಾಗೂ ಧಾರ್ಮಿಕ ಪರಂಪರೆಗಳನ್ನು ಉಳಿಸುವ ಪ್ರಾಧಿ ಕಾರ ರಚಿಸುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
 
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌. ಮಹಾಂತಣ್ಣ ಮಾತನಾಡಿ, ಪಟ್ಟಣದಲ್ಲಿ ಪ್ರಥಮ ಸಮ್ಮೇಳನ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಸಮ್ಮೇಳನಗಳು ಕೇವಲ ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗುವುದು ಸರಿಯಲ್ಲ. ಪ್ರಥಮ ಮಹಿಳಾ ಸಮ್ಮೇಳನಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ತಿಪ್ಪೇರುದ್ರಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಸಮ್ಮೇಳನವನ್ನು ಆಯೋಜಿಸುವಂತೆ ಜಿಲ್ಲಾಧ್ಯಕ್ಷರಲ್ಲಿ ಹಲವಾರು ಬಾರಿ ಒತ್ತಾಯ ಮಾಡಲಾಗಿತ್ತು. ಇದೀಗ ಅವಕಾಶ ದೊರೆತಿದೆ. ಇದಕ್ಕೆ ಸಂಬಂಧಿಸಿದಂತೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸಲಾಗಿದೆ. ಎಲ್ಲರ ಸಹಕಾರದಿಂದ ಸಮ್ಮೇಳನವನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಪಪಂ ಮುಖ್ಯಾಧಿಕಾರಿ ಭೂತಪ್ಪ ಮಾತನಾಡಿ, ಸಮ್ಮೇಳನಗಳು ರಾಜ್ಯದ ವಿಶೇಷ ಅಂಶಗಳಾಗಿವೆ. ಮಹಿಳೆಯರಿಗೆ ವಿಶೇಷ ಸಮ್ಮೇಳನ ಆಯೋಜಿಸುತ್ತಿರುವುದು ಹೊಸ ರೀತಿಯ ಪ್ರಯತ್ನ. ಪಪಂ ಸದಸ್ಯರ ಜತೆಗೆ ಇದಕ್ಕಾಗಿ ವಿಶೇಷ ಸಭೆ ನಡೆಸಲಾಗುವುದು. ಸಮ್ಮೇಳನಕ್ಕೆ ಅಗತ್ಯವಾದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. 

ಪಪಂ ಸದಸ್ಯರಾದ ಬಸಣ್ಣ, ಎಸ್‌.ಉಮಾಪತಿ, ವೈ. ಗಿರಿಜಮ್ಮ ಮಾತನಾಡಿದರು. ಪಪಂ ಅಧ್ಯಕ್ಷೆ ನೀಲಮ್ಮ, ಸದಸ್ಯರಾದ ಜೆ.ಆರ್‌. ರವಿಕುಮಾರ್‌, ನಾಗರಾಜ, ಜೆ.ಟಿ.ಎಸ್‌ ತಿಪ್ಪೇಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಬಿ.ಎಂ. ತಿಪ್ಪೇರುದ್ರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಗೋವಿಂದಪ್ಪ, ಹೋಬಳಿ ಅಧ್ಯಕ್ಷ ಆರ್‌.ಟಿ. ವೆಂಕಟೇಶ ರೆಡ್ಡಿ, ಗೌರವಾಧ್ಯಕ್ಷ ಮಹದೇವಣ್ಣ, ಆರ್‌. ಶ್ರೀಕಾಂತ್‌, ಮೈರಾಡ ಸಂಯೋಜಕ ಅಶೋಕ್‌ ಹಗೆದಾಳ್‌, ಧರ್ಮಸ್ಥಳ ಸಂಸ್ಥೆಯ ಸಂಯೋಜಕ ರಾಜು, ಶಿವಣ್ಣ, ಉಮೇಶ್‌ ಮತ್ತಿತರರು ಇದ್ದರು. 

Trending videos

Back to Top