CONNECT WITH US  

ಜಿಲ್ಲೆ ಮೇಲೆ ಮತ್ತೆ ಬರದ ಕರಿನೆರಳು

ಚಿತ್ರದುರ್ಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಕಳೆದ ಎರಡು ತಿಂಗಳುಗಳಿಂದ ಮಳೆಯಾಗುತ್ತಿಲ್ಲ. ಬಿತ್ತನೆ ಮಾಡಿರುವ ಫಸಲುಗಳು ನೆಲಕ್ಕೆ ಗೋಣು ಹಾಕಿವೆ. ಜಿಲ್ಲೆಯನ್ನು ಸತತವಾಗಿ ಕಾಡುತ್ತಿರುವ ಭೀಕರ ಬರ ಪ್ರಸಕ್ತ ಸಾಲಿನಲ್ಲೂ ಮುಂದುವರೆದಿದ್ದು, ಆ. 15ರ ನಂತರ ಬರಪೀಡಿತ ಜಿಲ್ಲೆ ಎಂದು ಘೋಷಣೆ ಆಗುವ ಸಾಧ್ಯತೆ ಇದೆ.

ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಪ್ರಮುಖ ವಾಣಿಜ್ಯ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಮಳೆಯಿಲ್ಲದೆ ಒಣಗುತ್ತಿವೆ. ಬಿತ್ತನೆ ಬೀಜ, ಗೊಬ್ಬರ, ಕೂಲಿಗಾಗಿ ರೈತರು ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಬಿತ್ತನೆ ಮಾಡಲು ಮಳೆಗಾಗಿ ಕಳೆದೆರಡು ತಿಂಗಳುಗಳಿಂದ ಚಾತಕಪಕ್ಷಿಯಂತೆ ಕಾಯುತ್ತಿದ್ದ ರೈತರಿಗೆ ಮಳೆ ನಿರಾಸೆಯನ್ನುಂಟು ಮಾಡಿದೆ. ಅರ್ಧಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಪ್ರಮಾಣಚ ತೀವ್ರ ಕುಸಿತ ಕಂಡಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ ಏಕದಳ, ದ್ವಿದಳ, ಎಣ್ಣೆಕಾಳುಗಳು ಹಾಗೂ ವಾಣಿಜ್ಯ ಬೆಳೆಗಳು ಸೇರಿ ಒಟ್ಟು 3,58,340 ಹೆಕ್ಟೇರ್‌ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ 1,71,547 ಹೆಕ್ಟೇರ್‌ನಲ್ಲಿ ಅಂದರೆ ಶೇ. 47.9 ರಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ. ಮುಂಗಾರು ಪ್ರವೇಶಕ್ಕೂ ಮೊದಲೇ ಜಿಲ್ಲೆಯಲ್ಲಿ ಒಂದಿಷ್ಟು
ಮಳೆಯಾಗಿತ್ತು. ಆದರೆ ಆಗ ಬಿತ್ತನೆ ಮಾಡುವ ದಿನಗಳಾಗಿರಲಿಲ್ಲ.

ಏಕದಳ ಬೆಳೆಗಳಾದ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ಸಿರಿಧಾನ್ಯ ಸಾವೆ ಸೇರಿ ಒಟ್ಟು 1,54,145 ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ 1,02,858 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ದ್ವಿದಳ ಬೆಳೆಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಇತರೆ ಬೆಳೆಕಾಳುಗಳು ಸೇರಿ 1,88,605 ಹೆಕ್ಟೇರ್‌ ಗುರಿ ಪೈಕಿ 1,13,585
ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.  ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳು ಮತ್ತು ಎಣ್ಣೆ ಕಾಳುಗಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಹರಳು, ಹುಚ್ಚೆಳ್ಳು, ಸಾಸುವೆ, ಸೋಯಾಬಿನ್‌ ಸೇರಿ 1,55,565 ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ 50,394 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ತಂಬಾಕು 14,170 ಹೆಕ್ಟೇರ್‌ ಗುರಿ ಪೈಕಿ 7568 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ಬರ ಘೋಷಣೆ ಮಾನದಂಡವೇನು?: ಮಳೆ ಪ್ರಮಾಣ, ಫಸಲಿನ ಹಸಿರು, ಬೆಳೆ ಹಾನಿ, ತೇವಾಂಶದ ಮಾಹಿತಿ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುತ್ತದೆ.
 
ಸತತ ನಾಲ್ಕು ವಾರಗಳಿಂದ ಮಳೆಯಿಲ್ಲದೆ ಒಣಹವೆ ಮುಂದುವರೆದಿದೆ. ಶೇ. 50ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿದ್ದರೆ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಕಳೆದ ಮೇ, ಜೂನ್‌, ಜುಲೈ ತಿಂಗಳುಗಳಿಂದ ಶೇ. 50 ಕ್ಕಿಂತ ಕಡಿಮೆ ಮಳೆಯಾಗಿದೆ. ಭೂಮಿಯಲ್ಲಿ ತೇವಾಂಶ ಶೇ. 50ಕ್ಕಿಂತ ಒಳಗಿದ್ದರೆ ಶೇ. 0-25 ಎಂದು ಪರಿಗಣಿಸಿ ತೀವ್ರ ಬರ, ಶೇ. 26-50 ರಷ್ಟು ಮಧ್ಯಮ ಬರ ಆಗಲಿದೆ. ಭೂಮಿಯಲ್ಲಿನ ಹಸಿರು ಶೇ. 0.66 ಕ್ಕಿಂತ ಕಡಿಮೆ ಇದ್ದು ಬರ ಘೋಷಣೆ ಆಗಲಿದೆ.
 
ಕರ್ನಾಟಕ ರಾಜ್ಯ ನೈಸರ್ಗಿತ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ ಡಿಎಂಸಿ) ಪ್ರಕಾರ ಆಗಸ್ಟ್‌ 4ರವರೆಗೆ ಚಳ್ಳಕೆರೆ ಶೇ. 59, ಚಿತ್ರದುರ್ಗ ಶೇ. 39, ಹಿರಿಯೂರು ಶೇ. 74, ಹೊಳಲ್ಕೆರೆ ಶೇ. 75, ಮೊಳಕಾಲ್ಮೂರು ಶೇ. 77, ಹೊಸದುರ್ಗ ಶೇ. 79 ರಷ್ಟು ಮಳೆ ಕೊರತೆ ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಶೇ. 63 ರಷ್ಟು ಮಳೆ ಕೊರತೆಯಾಗಿದೆ.
ಹಾಗಾಗಿ ಜಿಲ್ಲೆಯ ಹೊಳಲ್ಕೆರೆ ತಾಲೂಕು ಹೊರತುಪಡಿಸಿ ಉಳಿದ ಐದು ತಾಲೂಕುಗಳು ಬರಪೀಡಿತ ಎಂದು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. 

„ಹರಿಯಬ್ಬೆ ಹೆಂಜಾರಪ್ಪ

Trending videos

Back to Top